ಹೊಸಪೇಟೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಹೊಸಪೇಟೆ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ನಿರ್ವಾಹಕರೊಬ್ಬರಿಂದ ಲಂಚ ತೆಗೆದುಕೊಳ್ಳುತ್ತಿದ್ದಾಗ ರೆಡ್‌ಹ್ಯಾಂಡ್‌ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್.ಜಗದೀಶ್ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಅಧಿಕಾರಿ. ಬುಧವಾರ ರಾತ್ರಿ ಹೊಸಪೇಟೆಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಕರ್ತವ್ಯ ಲೋಪ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ನಿರ್ವಾಹಕರೊಬ್ಬರಿಂದ ₹20 ಸಾವಿರ ಲಂಚ ಪಡೆಯುತ್ತಿದ್ದಾಗ ಖೆಡ್ಡಕ್ಕೆ ಬೀಳಿಸಿದ್ದಾರೆ.
ನಿರ್ವಾಹಕರ ಪ್ರಕರಣದಲ್ಲಿ ಇಲಾಖಾ ವಿಚಾರಣೆಯನ್ನು ಕೈಬಿಡಲು ಡಿಸಿ ಜಗದೀಶ್ 25 ಸಾವಿರ ರೂ.ಗಳೀಗೆ ಬೇಡಿಕೆ ಇಟ್ಟಿದ್ದ. ಈ ಪೈಕಿ 5 ಸಾವಿರ ರೂ.ಗಳನ್ನು ಮುಂಗಡವಾಗಿ ಪಡೆದಿದ್ದ. ಇನ್ನು ಉಳಿದ 20 ಸಾವಿರ ರೂ.ಗಳನ್ನು ಕೆಕೆಆರ್‌ಟಿಸಿ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಸದ್ಯ ನಗದು ಸಮೇತ ಡಿಸಿ ಸಿಕ್ಕಿಬಿದ್ದಿರುವುದಾಗಿ ಬಳ್ಳಾರಿ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ತಿಳಿಸಿದ್ದಾರೆ. ಡಿವೈಎಸ್‌ಪಿ ಶೀಲವಂತ ಹೊಸಮನಿ ನೇತೃತ್ವದಲ್ಲಿ ಈ ದಾಳಿ ನಡೆಯಿತು ಎಂದು ವಿವರಿಸಿದ್ದಾರೆ.
ಸಾರಿಗೆಯ ನಾಲ್ಕೂ ನಿಗಮದ ಬಹುತೇಕ ಎಲ್ಲ ಡಿಸಿಗಳು ತಮ್ಮ ನೌಕರರಿಂದ ಲಂಚ ವಸೂಲಿ ಮಾಡುವುದಕ್ಕೇ ಡಿಪೋ ಮಟ್ಟದಲ್ಲಿ ಚೇಳಾಗಳನ್ನು ಇಟ್ಟುಕೊಂಡಿದ್ದಾರೆ. ಆ ಚೇಳಾಗಳಿಗೆ ನೌಕರರಿಂದ ಲಂಚ ವಸೂಲಿ ಮಾಡುವುದು ಬಿಟ್ಟರೆ ಬೇರೆ ಕೆಲಸವೇ ಇಲ್ಲ.
ಇನ್ನು ಇಂಥವರಿಗೆ ನೌಕರರ ಪರ ಸಂಘಟನೆಗಳು ಏನು ಮಾಡುವುದಿಲ್ಲ, ಕೆಚ್ಚೆದೆಯ ನೌಕರರೇ ಬುದ್ಧಿ ಕಲಿಸಬೇಕು. ಆದರೆ, ಬಹುತೇಕ ನೌಕರರು ಎಲ್ಲಿ ಕೆಲಸಕ್ಕೆ ಕುತ್ತು ತರುತ್ತರೋ ಎಂದು ಹೆದರಿ ಈ ಅಧಿಕಾರಿಗಳು ಮತ್ತು ಅವರ ಚೇಳಾಗಳು ಇಡುವ ಲಂಚದ ಬೇಡಿಕೆಗೆ ಒಪ್ಪಿ ಕಷ್ಟಪಟ್ಟು ದುಡಿದಿರುವುದನ್ನು ಈ ಮಿಕಗಳಿಗೆ ಹಾಕುತ್ತಿದ್ದಾರೆ.
ಇನ್ನಾದರೂ ಸಾರಿಗೆ ನಿಗಮದ ಎಲ್ಲ ಡಿಗಳು ಎಚ್ಚೆತ್ತುಕೊಳ್ಳಬೇಕು. ಜತೆಗೆ ನಾಲ್ಕೂ ನಿಗಮಗಳ ಎಂಡಿಗಳು ಇಂಥವರನ್ನು ವಜಾಮಾಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.