ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಸರ್ಕಾರಿ ನೌಕರನ ಪತ್ನಿ, ಪತಿಗಿಂತ ಮೊದಲೇ ನಿಧನರಾಗಿ ಆಕೆಗೆ ಮಕ್ಕಳಿರಲಿಲ್ಲದಿದ್ದಾಗ ಹಾಗೂ ಆನಂತರದಲ್ಲಿ ಸರ್ಕಾರಿ ನೌಕರನೂ ನಿಧನರಾದಾಗ ಅಂತಹ ಪ್ರಕರಣಗಳಲ್ಲಿ ನೌಕರನ ಸಹೋದರರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ವಿಜಯಪುರದ ಮುದ್ದೇ ಬಿಹಾಳದ ಅರಸನಾಳ ಗ್ರಾಮದ ಮೃತ ಉದ್ಯೋಗಿ ವೀರೇಶ್ ಮಂಟಪ್ಪ ಲೋಳಸರ ಅವರ ತಾಯಿ ಮಾಂತವ್ವ ಹಾಗೂ ಸಹೋದರ ಸಂಗಣ್ಣ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಸಹೋದರ ಸಂಗಣ್ಣನಿಗೆ ನೌಕರಿ ನೀಡುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಬಳ್ಳಾರಿ ವಿಭಾಗಕ್ಕೆ ಆದೇಶಿಸಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ”ಎರಡನೇ ಅರ್ಜಿದಾರರ (ಸಹೋದರ) ಮನವಿ ಪರಿಗಣಿಸಿ, ಹನ್ನೆರಡು ವಾರಗಳ ಅವಧಿಯಲ್ಲಿ ಅವರ ಅರ್ಹತೆಗೆ ಅನುಗುಣವಾಗಿ ಸೂಕ್ತ ಹುದ್ದೆಗೆ ಅನುಕಂಪದ ಆಧಾರದ ಮೇಲೆ ಅವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ನಿಗಮಕ್ಕೆ ನಿರ್ದೇಶಿಸಿತು. ಅಲ್ಲದೆ ಒಂದು ವೇಳೆ ಎರಡನೇ ಅರ್ಜಿದಾರರು ಅವರ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಆಕೆ ನೇಮಕ ಆದೇಶ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಹೊಂದಿರಲಿದ್ದಾರೆ ಎಂದು ನ್ಯಾಯಪೀಠ ಆದೇಶಿಸಿದೆ.
ವೀರೇಶ್ ಮಂಟಪ್ಪ ಲೋಳಸರ ಅವರ ಪತ್ನಿ ಸುನಂದಾ 2022ರ ಏ.9ರಂದು ನಿಧನ ರಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ ಮತ್ತು ವೀರೇಶ್ ತಮ್ಮ ತಾಯಿ ಮತ್ತು ಸಹೋದರನನ್ನು ನೋಡಿಕೊಳ್ಳುತ್ತಿದ್ದರು. ಆದ್ದರಿಂದ, ತಾಯಿ ನೋಡಿಕೊಳ್ಳುತ್ತಿರುವ ಅವರ ಸಹೋದರನಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಒದಗಿಸುವುದು ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಹೇಳಿದೆ.
ಅನುಕಂಪದ ಆಧಾರದ ಮೇಲೆ ನೇಮಕದ ಉದ್ದೇಶವು ಮೃತ ಉದ್ಯೋಗಿಯ ಕುಟುಂಬವನ್ನು ನೋಡಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುವುದಾಗಿದೆ ಮತ್ತು ಸಾವಿನಿಂದ ಉಂಟಾಗುವ ತುರ್ತು ಪರಿಸ್ಥಿತಿಗಳು ಕುಟುಂಬಕ್ಕೆ ಆರ್ಥಿಕ ಹೊರೆಯಾಗಬಾರದು ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.
ಮೃತ ಉದ್ಯೋಗಿಯ ಸಂಗಾತಿಯು 2022ರ ಏ.9ರಂದು ಅವರಿಗಿಂತ ಮೊದಲೇ ನಿಧನರಾಗಿದ್ದರು ಮತ್ತು ಅವರಿಗೆ ಅನುಕಂಪದ ನೇಮಕ ಹಕ್ಕು ಮಂಡಿಸಲು ಯಾವುದೇ ಮಕ್ಕಳಿಲ್ಲ ಎಂಬುದು ವಾಸ್ತವ. ತಾಯಿ ಮತ್ತು ಸಹೋದರ ಒಟ್ಟಿಗೆ ವಾಸಿಸುತ್ತಿದ್ದಾರೆ ಮತ್ತು ಸಂಗಾತಿಯ ಮರಣದ ನಂತರ, ಮೃತ ಉದ್ಯೋಗಿ ತನ್ನ ತಾಯಿ ಮತ್ತು ಸಹೋದರ ಇಬ್ಬರನ್ನೂ ನೋಡಿಕೊಳ್ಳುತ್ತಿದ್ದರು ಎಂದು ನ್ಯಾಯಾಲಯ ಹೇಳಿದೆ.

ಈ ದೃಷ್ಟಿ ಕೋನದ ಹಿನ್ನೆಲೆಯಲ್ಲಿ ಎರಡನೇ ಪುತ್ರ ತಾಯಿ ನೋಡಿಕೊಳ್ಳುತ್ತಿರುವುದರಿಂದ ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಎರಡನೇ ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ಸರಿಯಾದ ದೃಷ್ಟಿಕೋನದಿಂದ ಪರಿಗಣಿಸಬೇಕಾಗುತ್ತದೆ ಎಂದು ಹೇಳಿರುವ ನ್ಯಾಯಪೀಠ ರಸ್ತೆ ಸಾರಿಗೆ ಸಂಸ್ಥೆಯ ನೀತಿಯ ಪ್ರಕಾರ, ಮೃತರು ವಿವಾಹಿತರಾಗಿದ್ದರೆ, ಪತ್ನಿ ಮತ್ತು ಮಕ್ಕಳನ್ನು ಹೊರತುಪಡಿಸಿ ಬೇರೆ ಯಾರಿಗೂ ಅನುಕಂಪದ ಹುದ್ದೆ ನೀಡಲಾಗದೆಂಬ ಕೆಕೆಆರ್‌ಟಿಸಿ ಪರ ವಕೀಲರ ವಾದ ಒಪ್ಪಲಾಗದು ಎಂದು ಹೇಳಿದೆ.
Related
