KKRTC ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ತಾತ್ಕಾಲಿಕ ನೇಮಕ


ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ಅವರನ್ನು ತಾತ್ಕಾಲಿಕವಾಗಿ ನೇಮಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು (CPM) ಆದೇಶ ಹೊರಡಿಸಿದ್ದಾರೆ.
ಹಾಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಎಂ.ವೆಂಕಟೇಶ್ ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಜಾಧವ್ ರಾಜೇಂದ್ರ ಬಾಹುರಾವ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇಂದು ಈ ಸಂಬಂಧ ಆದೇಶ ಹೊರಡಿಸಿದ್ದು, ಸಂಸ್ಥೆಯ ಸೂಕ್ತಾಧಿಕಾರಿಗಳ ಆದೇಶದಂತೆ ನಿಗಮದ ಕಲಬುರಗಿ ಕೇಂದ್ರ ಕಚೇರಿಯಲ್ಲಿ ಈವರೆಗೂ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ) ರಾಗಿದ್ದ ಜಾಧವ್ ರಾಜೇಂದ್ರ ಬಾಹುರಾವ್ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆಯ ಕಾರ್ಯಭಾರವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ನಿರ್ವಹಿಸಲು ಆದೇಶ ಮಾಡಿದ್ದಾರೆ.
ಈ ಅಧಿಕಾರಿ ಕೂಡಲೇ ನಿಯೋಜಿತ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಳ್ಳಬೇಕು ಎಂದು ತಿಳಿಸಿರುವ ಅವರು, ಮುಖ್ಯ ಲೆಕ್ಕಾಧಿಕಾರಿ (ಪ್ರ)/ ಮುಖ್ಯ ಸಂಚಾರ ವ್ಯವಸ್ಥಾಪಕರು, ಎಲ್ಲ ಇಲಾಖಾ ಮುಖ್ಯಸ್ಥರು, ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಪ್ರಾಂಶುಪಾಲರು, ಕಾರ್ಯ ನಿರ್ವಾಹಕ ಅಭಿಯಂತರರು, ಕಾರ್ಯ ವ್ಯವಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಆಪ್ತ ಕಾರ್ಯದರ್ಶಿ ಅವರ ಮಾಹಿತಿಗಾಗಿ ಪ್ರತಿಯನ್ನು ರವಾನಿಸಿದ್ದಾರೆ.
ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಎಂ.ವೆಂಕಟೇಶ್ ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸುವ ಮೂಲಕ ಬೀಳ್ಕೊಡಲಾಯಿತು.

Related
