ವಿಜಯಪುರ ವಿಭಾಗದ ಸಂಚಾರ ಅಧಿಕಾರಿ ದೇವಾನಂದ ಬಿರಾದಾರ ವಿರುದ್ಧ ಗಂಭೀರ ಆರೋಪ
ವಿಜಯಪುರ: ಸಾರಿಗೆ ಸಚಿವರ ಸಂಬಂಧಿಯೊಬ್ಬರು ಎಂದು ಸುಳ್ಳು ಹೇಳಿ ಇಂಡಿ ಘಟಕದ ಬಸ್ಸೊಂದನ್ನು ಸಾಲುಟಗಿಯಿಂದ ಕಲಬುರಗಿಗೆ ತಮ್ಮ ಸಂಬಂಧಿಯೊಬ್ಬನ ಬಿಟ್ಟು ಬರುವುದಕ್ಕೆ ಕಳುಹಿಸುವ ಮೂಲಕ ಸಂಸ್ಥೆಯ ವಾಹನ ಮತ್ತು ಚಾಲಕನನ್ನು ಕೆಕೆಆರ್‌ಟಿಸಿ ವಿಜಯಪುರ ವಿಭಾಗದ ಸಂಚಾರ ಅಧಿಕಾರಿ (DTO ) ದೇವಾನಂದ ಬಿರಾದಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ಸಂಸ್ಥೆಗೆ 10-15 ಸಾವಿರ ರೂಪಾಯಿ ನಷ್ಟವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹೌದು! ಸಾರಿಗೆ ಸಚಿವರ ಸಂಬಂಧಿ ಸಾಲುಟಗಿಯಲ್ಲಿ ಇದ್ದಾರೆ ಎಂದು ಫೆ.9ರಂದು ರಾತ್ರಿ 9 ಗಂಟೆ ಸುಮಾರಿಗೆ ಇಂಡಿ ಘಟಕದ ವ್ಯವಸ್ಥಾಪಕರಿಗೆ ಫೋನ್ ಮಾಡಿದ DTO ದೇವಾನಂದ ಬಿರಾದಾರ ಅವರು ಸಾರಿಗೆ ಸಚಿವರ ಸಂಬಂಧಿಯವರು ಬಂದಿದ್ದಾರೆ, ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಸಂಚಾರ ವ್ಯವಸ್ಥಾಪಕರು ನನಗೆ ದೂರವಾಣಿ ಕರೆ ಮಾಡಿ ಹೇಳಿದ್ದಾರೆ ಎಂದು ಸುಳ್ಳು ಹೇಳಿ ಘಟಕ ವ್ಯವಸ್ಥಾಪಕರನ್ನು ನಂಬಿಸಿದ್ದಾರೆ.
ಆ ಬಳಿಕ ಅವರನ್ನು ಸಾಲುಟಗಿಯಿಂದ ಕಲಬುರಗಿಗೆ ಬಿಟ್ಟು ಬರಬೇಕು ಎಂದು ಹೇಳಿದ್ದಾರೆ. ಈ ವೇಳೆ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೊರಡುತ್ತಿದ್ದ ಚಾಲಕ ಕಂ ನಿರ್ವಾಹಕ ಶಬ್ಬೀರ ಬೆನೂರ ಅವರನ್ನು ಮತ್ತೆ ಕರ್ತವ್ಯಕ್ಕೆ ಕಳುಹಿಸಿದ್ದಾರೆ. ಸಂಚಾರ ಅಧಿಕಾರಿ ದೇವಾನಂದ ಬಿರಾದಾರ ಅವರ ಸಂಬಂಧಿ ಒಬ್ಬನಿಗಾಗಿ ಸಂಸ್ಥೆ ಬಸ್ ಸುಮಾರು 214 ಕಿಲೋ ಮೀಟರ್ ಓಡಿದೆ.
ಈ ಬಸ್ಸನ್ನು ಓಡಿಸಿದ್ದರಿಂದ ಸಂಸ್ಥೆಗೆ ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು, ಸಾರಿಗೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿ, ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಂಡು ಆರೋಪಿಯನ್ನು ಸಂಸ್ಥೆಯಿಂದ ವಜಾ ಮಾಡಬೇಕು ಎಂದು ಯಾಕೂಬ್ ನಾಟಿಕಾರ ಆಗ್ರಹಿಸಿದ್ದಾರೆ.
ವಿವರ: ಫೆ.9-2024ರ ರಾತ್ರಿ 9.30ಕ್ಕೆ ಇಂಡಿ -ಸಾಲುಟಗಿ – ಅಲಮೇಲೆ -ಆಫ್ಜಲ್ಪುರ್-ಕಲಬುರಗಿ ಹೋಗಿ ಮತ್ತು ಕಲಬುರಗಿಯಿಂದ ಇಂಡಿ ವರೆಗೆ ಒಟ್ಟು ಹೋಗೋದು ಬರೋದು ಸೇರಿ 214 ಕಿಲೋ ಮೀಟರ್ ಬಸ್ ಕ್ರಮಿಸಿದೆ. ಹೋಗಲಿ ಜನರಾದರೂ ಈ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದಾರೆಯೇ ಎಂದರೆ ಇಲ್ಲ. ದೇವಾನಂದ ಬಿರಾದಾರ ಅವರ ಸಂಬಂಧಿ ಒಬ್ಬರೆ ಪ್ರಯಾಣ ಬೆಳೆಸಿದ್ದು, ಬಿಟ್ಟರೆ ಬೇರೆ ಯಾರು ಪ್ರಯಾಣಿಸಿಲ್ಲ. ಜತೆಗೆ ರಾತ್ರಿಯಾಗಿದ್ದರಿಂದ ಬಸ್ ಖಾಲಿಯಾಗಿಯೇ ವಾಪಸ್ ಬಂದಿದೆ ಎಂದು ಆರೋಪಿಸಿದ್ದಾರೆ.
ಆರೋಪ ಏನು: ಫೆಬ್ರವರಿ 9- 2024 ರಂದು ಇಂಡಿ ಘಟಕದ ವಾಹನ ಸಂಖ್ಯೆ KA28 F2492ಅನ್ನು ಇಂಡಿಯಿಂದ ಕಲಬುರಗಿ ಮಾರ್ಗಕ್ಕೆ ರಾತ್ರಿ 9:30 ಘಂಟೆಗೆ EXTRAದ ಮೇಲೆ ಕಳುಹಿಸಲಾಗಿದೆ. ಈ ವಿಷಯವಾಗಿ ವಿಜಯಪುರ ವಿಭಾಗದ ಸಂಚಾರ ಅಧಿಕಾರಿ ದೇವಾನಂದ ಬಿರಾದಾರ ಅವರು ತಮ್ಮ ಅಧಿಕಾರದ ದುರುಪಯೋಗ ಪಡಿಸಿಕೊಂಡು ತಮ್ಮ ಸಂಬಂಧಿಯನ್ನು ಕಲಬುರಗಿಗೆ ಈ ಬಸ್ಸಿನಲ್ಲಿ ಕಳುಹಿಸಿದ್ದಾರೆ.
ಈ ವಾಹನಕ್ಕೆ ಶಬ್ಬೀರ ಬೆನೂರ ಚಾಲಕ ಕಂ ನಿರ್ವಾಹಕ ಅವರನ್ನು ಬಳಸಿಕೊಂಡಿದ್ದಾರೆ. ಶಬ್ಬೀರ ಬೆನೂರ ಅವರಿಗೆ ಸ್ವತಃ ದೇವಾನಂದ ಬಿರಾದಾರ ಅವರೇ ದೂರವಾಣಿ ಕರೆ ಮಾಡಿ ಸಾರಿಗೆ ಸಚಿವರ ಸಂಬಂಧಿಯವರು ಬಂದಿದ್ದಾರೆ. ಈ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಸಂಚಾರ ವ್ಯವಸ್ಥಾಪಕರು ನನಗೆ ದೂರವಾಣಿ ಕರೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಹೀಗಾಗಿ ಈ ಕೂಡಲೇ ಸಚಿವರ ಸಂಬಂಧಿಯವರನ್ನು ಸಾಲುಟಗಿಯಿಂದ ಕಲಬುರಗಿಗೆ ಬಿಟ್ಟು ಬರಬೇಕು ಎಂದು ಸೂಚಿಸಿದ್ದಾರೆ ಎಂಬ ಆರೋಪ ಸಂಚಾರ ಅಧಿಕಾರಿ ದೇವಾನಂದ ಬಿರಾದಾರ ಅವರ ಮೇಲೆ ಇದೆ.
ಇನ್ನು ಶಬ್ಬೀರ ಬೆನೂರ ಅವರು ಡ್ಯೂಟಿ ಇಳಿದಿದ್ದರೂ ಸಹ ಅಧಿಕಾರಿಗಳ ಮಾತು ಕೇಳಿ ಒಬ್ಬರನ್ನೇ ಸಾಲುಟಗಿಯಿಂದ ಕಲಬುರಗಿಗೆ ಬಿಟ್ಟು ಬಂದಿದ್ದಾರೆ. ಇನ್ನು ಸಾರಿಗೆ ನಿಗಮದ ಈ ಸಂಕಷ್ಟದ ಸಮಯದಲ್ಲಿ ಕೇವಲ ಒಬ್ಬರಿಗೋಸ್ಕರ ವಾಹನ ಬಿಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ್ದಾರೆ ಯಾಕೂಬ್ ನಾಟಿಕಾರ.
ಈ ಹಿಂದೆಯೂ ಸಹ ದೇವಾನಂದ ಬಿರಾದಾರ ಅವರು ಪತ್ನಿ ಜತೆ ಓಡಾಡಲು ಇಲಾಖಾ ವಾಹನವನ್ನು ಸ್ವಂತಕ್ಕೆ ಬಳಕೆ ಮಾಡಿರುವ ಆರೋಪವಿದೆ. ಅಲ್ಲದೆ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿರುವ ನಂದಿನಿ ಕ್ಯಾಂಟೀನ್‌ಅನ್ನು ಭ್ರಷ್ಟಾಚಾರ ಮಾಡಿ ಪರವಾನಗಿದಾರರಿಂದ ಹಣ ಪಡೆದು 9.5 ಲಕ್ಷ ರೂ. ಬಾಡಿಗೆ ಇದಿದ್ದನ್ನು ಬರಿ 4 ಲಕ್ಷ ರೂ.ಗಳಿಗೆ ಮಾಡಿಕೊಟ್ಟಿರುವ ಆರೋಪವೂ ಸಹ ಇದೆ.
ಸುಮಾರು 3 ವರ್ಷ ಕಳೆದರೂ ಸಹ ಇವರ ಮೇಲೆ ಈವರೆಗೂ ಯಾವುದೇ ಮೇಲಧಿಕಾರಿ ಯಾವುದೂ ಕ್ರಮ ಜರುಗಿಸಿಲ್ಲ. ಕೊಪ್ಪಳ ವಿಭಾಗದಲ್ಲಿ ಸಂಸ್ಥೆಯ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪವು ಸಹ ಇವರ ಮೇಲೆ ಇದೆ.
ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಬೇಕಾದವರಿಗೆ ಕನಿಷ್ಠ ಶಿಕ್ಷೆ, ಬೇಡದವರಿಗೆ ಗರಿಷ್ಠ ಶಿಕ್ಷೆ ನೀಡಿರುವುದು ಸೇರಿ ಇನ್ನಿತರೇ ಆರೋಪಗಳು ಇವರ ಮೇಲೆ ಇವೆ. ಇಂತಹ ಭ್ರಷ್ಟ ಮತ್ತು ನೌಕರರ ವಿರೋಧಿ ಅಧಿಕಾರಿ ವಿಜಯಪುರ ವಿಭಾಗಕ್ಕೆ ಬೇಕಾ ಎಂದು ಯಾಕೂಬ್ ನಾಟಿಕಾರ ಪ್ರಶ್ನಿಸಿದ್ದಾರೆ.
ಸದ್ಯ ಈಗ ಬಸ್ ಮತ್ತು ಸಂಸ್ಥೆಯ ಚಾಲಕನನ್ನು ದುರುಪಯೋಗ ಪಡಿಸಿಕೊಂಡಿರುವುದಕ್ಕೆ ಸೂಕ್ತ ತನಿಖೆ ಮಾಡಿ ಅವರ ವಿರುದ್ಧ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಯಾಕೂಬ್ ನಾಟಿಕಾರ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.