KKRTC: ಬಸ್ ತಡೆದು ನಿರ್ವಾಹಕನ ಮೇಲೆ ಕಿಡಿಗೇಡಿಗಳಿಂದ ಹಲ್ಲೆ- 3 ಸಾವಿರ ರೂ. ಚಿನ್ನದ ಸರ ಎಗರಿಸಿ ಪರಾರಿ: FIR ದಾಖಲು

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ತಡೆದ ಕಿಡಿಗೇಡಿಗಳು ನಿರ್ವಾಹಕನ ಮೇಲೆ ಹಲ್ಲೆ ಮಾಡಿ, ಟಿಕೆಟ್‌ನಿಂದ ಸಗ್ರಹವಾಗಿದ್ದ 3 ಸಾವಿರ ರೂಪಾಯಿ ಹಾಗೂ ನಿರ್ವಾಹಕನ ಕೊರಳಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ಸಿಂದಗಿ ತಾಲೂಕಿನ ಕನ್ನೊಳ್ಳಿಯಲ್ಲಿ ಬೆಳಕಿಗೆ ಬಂದಿದೆ.
KKRTC ಸಿಂದಗಿ ಘಟಕದ ಚಾಲಕ ಕಂ ನಿರ್ವಾಹಕ ಶಂಕರಗೌಡ ಶಿವಲಿಂಗಪ್ಪಗೌಡ ಪಾಟೀಲ ಎಂಬುವರೆ ಹಲ್ಲೆಗೊಳಗಾದವರು. ಐವರಿದ್ದ ಗುಂಪೊಂದು ನಿರ್ವಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಹಣ ಕಸಿದುಕೊಂಡು ಜೀವ ಬೆದರಿಕೆ ಕೂಡ ಹಾಕಿದ್ದಾರೆ ಪಾಪಿಗಳು.
ಘಟನೆಯಲ್ಲಿ ಟಿಕೆಟ್‌ನಿಂದ ಸಗ್ರಹವಾಗಿದ್ದ 3 ಸಾವಿರ ರೂಪಾಯಿ ನಗದು ಹಾಗೂ ಕೊರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದಾರೆ ಎಂದು ನಿರ್ವಾಹಕ ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಪ್ಪ ಬಸಪ್ಪ ಚೌದರಿ, ಬಲಭೀಮ ಗೋಲ್ಲಾಳಪ್ಪ ಚೌದರಿ, ಗೋಲ್ಲಾಳಪ್ಪ ಬಸಪ್ಪ ಚೌದರಿ, ಪವನ ಗೋಲ್ಲಾಳಪ್ಪ ಚೌದರಿ ಹಾಗೂ ಮಲ್ಲು ಪೂಜಾರಿ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಜು.19ರಂದು ಕನ್ನೊಳ್ಳಿ ಟೋಲ್‌ಗೇಟ್‌ನಲ್ಲಿ ಟೋಲ್ ಕಟ್ಟಲೆಂದು ಬಸ್ ನಿಲ್ಲಿಸಿದ ಸಂದರ್ಭ ಹಿಂದಿನಿಂದ ಟಂಟಂನಲ್ಲಿ ಬಂದ ಐವರು ಬಸ್‌ಗೆ ಕೈಯಿಂದ ಜೋರಾಗಿ ಬಡಿಯಲಾರಂಭಿಸಿದ್ದಾರೆ. ಬಸ್ ಮುಂದಕ್ಕೆ ತೆಗೆದುಕೊಂಡು ಹೋಗಿ ನಿಲ್ಲಿಸಿದ ಶಂಕರಗೌಡ ವಾಪಸ್ ಬಂದು ವಿಚಾರಿಸಿದಾಗ ಟಂಟಂದಲ್ಲಿದ್ದವರು ಹಲ್ಲೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಬಸ್ ಕನ್ನೊಳ್ಳಿಗೆ ಬಂದು ನಿಂತಾಗ ಹಿಂದಿನಿಂದ ಬಂದ ಈ ಕಿಡಿಗೇಡಿಗಳು ಡ್ಯೂಟಿ ಮೇಲಿದ್ದ ಶಂಕರಗೌಡ ಅವರ ಅಂಗಿ ಕಾಲರ್ ಹಿಡಿದು ಎಳೆದಾಡಿ, ಕೊರಳಲ್ಲಿದ್ದ ಇಟಿಎಂ ಯಂತ್ರ ಕಸಿದುಕೊಂಡು ಒಡೆದು ಹಾಕಿದ್ದಾರೆ. ಆಗ ಸಂಸ್ಥೆಯ ಆದಾಯದ ಹಣ 3 ಸಾವಿರ ರೂಪಾಯಿ ಹಾಗೂ ಕೊರಳಲ್ಲಿದ್ದ ಚಿನ್ನದ ಸರ ಕಳೆದು ಹೋಗಿದೆ.

ಇಷ್ಟೆಲ್ಲ ಗಲಾಟೆ ಬಳಿಕ ಬಳಿಕವೂ ನೀನು ಇನ್ಮುಂದೆ ಈ ಊರ ಮೇಲೆ ಹೇಗೆ ಡ್ಯೂಟಿ ಮಾಡುತ್ತಿ ನೋಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ಶಂಕರಗೌಡ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
Related








