
ಬೆಂಗಳೂರು: ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸದಸ್ಯತ್ವವನ್ನು ಹೊಂದಿರುವ ಪ್ರತಿಷ್ಠಿತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU) ವತಿಯಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕ್ಕೆ 2023-24ನೇ ಸಾಲಿನ ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿ (National Transport Excellence Award) ಲಭಿಸಿರುವುದು ಹರ್ಷದಾಯಕವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ನಿಗಮದ ಸಂಚಾರಿ ತರಬೇತಿ ವಾಹನವನ್ನು ಘಟಕಗಳಿಗೆ ತೆಗೆದುಕೊಂಡು ಹೋಗಿ ಚಾಲಕರ ತರಬೇತಿಗೆ ಅವಕಾಶ ಕಲ್ಪಿಸಲು ತೆಗೆದುಕೊಂಡ ಉಪಕ್ರಮಕ್ಕೆ (Initiatives) ರಾಷ್ಟ್ರೀಯ ರಸ್ತೆ ಸಾರಿಗೆಗಳ ನಿಗಮದ ಒಕ್ಕೂಟವು ರಾಷ್ಟ್ರಮಟ್ಟದ ‘ಬೆಸ್ಟ್ ರೋಡ್ ಸೇಫ್ಟಿ ಪ್ರಾಕ್ಟಿಸಸ್’ ವಿಭಾಗದಡಿ ಪ್ರಥಮ ಪ್ರಶಸ್ತಿಗೆ ಆಯ್ಕೆ ಮಾಡಿ. ಪ್ರಶಸ್ತಿಯನ್ನು ಮಾ.15ರಂದು ದೆಹಲಿಯಲ್ಲಿ ನಡೆದ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ 64ನೇ ವಾರ್ಷಿಕ ಸಮಾವೇಶದಲ್ಲಿ ಪ್ರದಾನ ಮಾಡಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣಿಕರಿಗೆ ವ್ಯವಸ್ಥಿತ ಮತ್ತು ಸುರಕ್ಷಿತ ಬಸ್ ಸೇವೆ ಒದಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2022-23ನೇ ಸಾಲಿನಲ್ಲಿ ಜಿಲ್ಲಾಡಳಿತದಿಂದ ಹೈಟೆಕ್ ಮಾದರಿಯ ಸಂಚಾರಿ ತರಬೇತಿ ವಾಹನ (ಮೊಬೈಲ್ ಕಾನ್ಸರೆನ್ಸ್ ಟ್ರೇನಿಂಗ್ ಬಸ್) ಪಡೆದುಕೊಂಡು ಈ ವಾಹನದಲ್ಲಿ ಚಾಲಕರಿಗೆ ರಸ್ತೆ ಸುರಕ್ಷತೆ ನಿಯಮಗಳ ಕುರಿತು ತರಬೇತಿ ನೀಡುವುದಕ್ಕಾಗಿ ಸಿದ್ಧಪಡಿಸಲಾಗಿದೆ. ಈ ವಾಹನವನ್ನು ನಿಗಮದ 9 ವಿಭಾಗಗಳ ವ್ಯಾಪ್ತಿಯ 52 ಘಟಕಗಳಿಗೆ ತೆಗೆದುಕೊಂಡು ಹೋಗಿ ತರಬೇತಿಯನ್ನು ನೀಡಲಾಗುತ್ತಿದೆ.
ತರಬೇತಿ ವಾಹನದ ವೈಶಿಷ್ಟ್ಯ: ಬಸ್‌ನಲ್ಲಿ 16 ಆಸನಗಳಿದ್ದು, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದೆ. ಎಲ್‌ಇಡಿ ಸ್ಟ್ರೀನ್ ಹಾಗೂ ಆಡಿಯೋ ಸಿಸ್ಟಮ್ ವ್ಯವಸ್ಥೆ ಇರುತ್ತದೆ. ಈ ವಾಹನವನ್ನು ಘಟಕಗಳಿಗೆ ತೆಗೆದುಕೊಂಡು ಹೋಗಿ 2022-23ನೇ ಸಾಲಿನಲ್ಲಿ ಒಟ್ಟು 6,583 ಚಾಲಕರಿಗೆ ತರಬೇತಿ ನೀಡಲಾಗಿದೆ. ಇದರಿಂದ ನಿಗಮಕ್ಕೆ ಸರಾಸರಿ 2 ಕೋಟಿ ರೂ.ಗಳಷ್ಟು ವೆಚ್ಚದಲ್ಲಿ ಉಳಿತಾಯವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ವಿವರಿಸಿದ್ದಾರೆ.
ಇನ್ನು ಈ ಪ್ರಶಸ್ತಿಯನ್ನು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವಿಜಯಪುರ ವಿಭಾಗದ ಮುಖ್ಯ ಯಾಂತ್ರಿಕ ಶಿಲ್ಪಿ ಸಂತೋಷ್ ಗೋಗೇರಿ ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಸ್ವೀಕರಿಸಿದ್ದಾರೆ. ಈ ವಿಚಾರವನ್ನು ಅವರು ಮಾ.24ರಂದು ಸಚಿವರೊಂದಿಗೆ ಹಂಚಿಕೊಂಡಿದ್ದಾರೆ.
ಸಂಸ್ಥೆಯ ಈ ಸಾಧನೆಯನ್ನು ಶ್ಲಾಘಿಸಿರುವ ಸಚಿವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸುಗಳತ್ತ ಸಂಸ್ಥೆ ಸಾಗಲಿ ಎಂಬ ಹಾರೈಸಿದ್ದಾರೆ.