NEWSನಮ್ಮಜಿಲ್ಲೆನಮ್ಮರಾಜ್ಯ

KKRTC ಅಧಿಕಾರಿ-ಸಿಬ್ಬಂದಿಗಳು ಕಚೇರಿಗೆ ಭೇಟಿ ನೀಡುವಾಗ ಈ ನಿಯಮ ಪಾಲಿಸಬೇಕು: ಸಂಸ್ಥೆಯ ಎಂಡಿ ಸುಶೀಲಾ ನಿರ್ದೇಶನ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ನಿಗಮದ ಅಧಿಕಾರಿ-ಸಿಬ್ಬಂದಿಗಳು ವೈಯಕ್ತಿಕ ಕಾರ್ಯಗಳಿಗಾಗಿ ಕಚೇರಿಗೆ ಭೇಟಿ ನೀಡುವಾಗ ಈ ನಿಯಮಗಳನ್ನು ಪಾಲಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸುಶೀಲಾ ಸೂಚನೆ ನೀಡಿದ್ದಾರೆ.

ನಿಗಮದ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಕಾರ್ಯಗಳ ನಿಮಿತ್ತ ಆಗಾಗ ಕೇಂದ್ರ ಕಚೇರಿ, ವಿಭಾಗಿಯ ಕಚೇರಿಗಳಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕಚೇರಿಗೆ ಭೇಟಿ ನೀಡುವ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಈ ಕೆಳಗಿನಂತೆ ನಿರ್ದೇಶನ ನೀಡಿದ್ದಾರೆ.

1) ಕಚೇರಿಯಲ್ಲಿ ಭೇಟಿಗಾಗಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ವರೆಗೆ ಹಾಗೂ ಶನಿವಾರ ಮಧ್ಯಾಹ್ನ 12:30ರಿಂದ 1:30ರವರೆಗೆ (ರಜಾ ದಿನ ಹೊರತುಪಡಿಸಿ) ಮಾತ್ರ ಅವಕಾಶವಿದೆ.

2) ಅಧಿಕಾರಿ/ ಸಿಬ್ಬಂದಿಗಳು ತಮ್ಮ ವಾರದ ರಜೆ ಅಥವಾ ಅಧಿಕೃತ ರಜೆಯ ದಿನದಂದು ಮಾತ್ರ ಭೇಟಿಗೆ ಬರತಕ್ಕದ್ದು; ಕರ್ತವ್ಯಕ್ಕೆ ಗೈರು ಹಾಜರಾಗಿ ಬರಬಾರದು ಎಂದು ತಿಳಿಸಿದ್ದಾರೆ.

3) ಕಚೇರಿಗೆ ಕೇವಲ ಅಧಿಕಾರಿ/ ಸಿಬ್ಬಂದಿಗಳು ಮಾತ್ರ ಬರತಕ್ಕದ್ದು. ಅವರು ತಮ್ಮೊಂದಿಗೆ ತಮ್ಮ ಕುಟುಂಬದ ಇತರ ಸದಸ್ಯರನ್ನು ಸ್ನೇಹಿತರನ್ನು ಅಥವಾ ಇನ್ಯಾವುದೇ ವ್ಯಕ್ತಿಯನ್ನು ಜತೆಯಲ್ಲಿ ಕರೆದುಕೊಂಡು ಬರಬಾರದು.

4) ಅಧಿಕಾರಿ/ ಸಿಬ್ಬಂದಿಗಳು ತಮ್ಮ ಮನವಿಯನ್ನು ಮುದ್ರಿಸಿಕೊಂಡು ಅಥವಾ ಸ್ಪಷ್ಟವಾಗಿ ಬರೆದುಕೊಂಡು ದಾಖಲೆಗಳ ಸಮೇತ (ಇದ್ದಲ್ಲಿ) ಸಲ್ಲಿಸತಕ್ಕದ್ದು, ಮನವಿಯಲ್ಲಿನ ವಿಷಯಗಳು ಸ್ಪಷ್ಟವಾಗಿ, ಚಿಕ್ಕದಾಗಿ, ಚೊಕ್ಕವಾಗಿ ಹಾಗೂ ವಿಷಯಕ್ಕೆ ಸೀಮಿತವಾಗಿ ಇರತಕ್ಕದ್ದು.

5) ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಅಥವಾ ವಿಭಾಗಗಳಲ್ಲಿ ಯೂನಿಟ್ ಮುಖ್ಯಸ್ಥರನ್ನು ನೇರವಾಗಿ ಭೇಟಿಯಾಗುವ ಮೊದಲು ಸಂಬಂಧಪಟ್ಟ ಇಲಾಖಾ/ ಶಾಖಾ ಮುಖ್ಯಸ್ಮರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳತಕ್ಕದ್ದು. ಒಂದುವೇಳೆ ಅವರಿಂದ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮಾತ್ರ ಮೇಲಧಿಕಾರಿಗಳನ್ನು ಭೇಟಿಯಾಗತಕ್ಕದ್ದು.

6) ಭೇಟಿಯ ಸಮಯದಲ್ಲಿ ತಮ್ಮ ಮೊಬೈಲ್ ಫೋನನ್ನು ಸ್ವಿಚ್-ಆಫ್ ಅಥವಾ ಸೈಲೆಂಟ್ ಮೋಡ್ನಲ್ಲಿ ಇರಿಸತಕ್ಕದ್ದು.

7) ಕೆಲವು ಸಿಬ್ಬಂದಿಗಳು ತಮ್ಮ ವೈಯಕ್ತಿಕ ಕಾರ್ಯ ಸಾಧನೆಗಾಗಿ ಗಣ್ಯ ವ್ಯಕ್ತಿಗಳ ಶಿಫಾರಸು ಮಾಡಿಸುವುದು, ಒತ್ತಡ ಹೇರುವುದನ್ನು ಮಾಡುತ್ತಿದ್ದು ಇದು ನಿಗಮದ ನಡತೆ ಮತ್ತು ಶಿಸ್ತು ನಿಯಮಗಳ ವಿರುದ್ಧವಾಗಿರುತ್ತದೆ. ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅವಕಾಶವಿದೆ.

8) ಭೇಟಿಗೆ ಹೊರಡುವ ಮೊದಲು ಭೇಟಿಯಾಗಲು ಬಯಸುವ ಅಧಿಕಾರಿಗಳ ಲಭ್ಯತೆ ಕುರಿತು ಖಾತ್ರಿಪಡಿಸಿಕೊಂಡು ಬಂದಲ್ಲಿ ನಿಮ್ಮ ಸಮಯ/ಪ್ರಯತ್ನ ವ್ಯರ್ಥವಾಗುವುದನ್ನು ತಪ್ಪಿಸಬಹುದು.

ಕಚೇರಿಗೆ ಭೇಟಿ ನೀಡುವ ಮೊದಲು ಮೇಲಿನ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಪಾಲಿಸಲು ಈ ಮೂಲಕ ನಿಗಮದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಈ ಸುತ್ತೋಲೆಯು ಈ ಕೂಡಲೇ ಜಾರಿಗೆ ಬರುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!