ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲ್ಯಾಣ ರಥ ಪ್ರತಿಷ್ಠಿತ ಸಾರಿಗೆ ವಾಹನವನ್ನು ನಿವೃತ್ತ ವಿಭಾಗೀಯ ನಿಯಂತ್ರಣಾಧಿಕಾರಿ ಜೆ.ಎಂ. ಫೈಜ್ ಅವರು ಸಂಸ್ಥೆಯಿಂದ ನಿವೃತ್ತಿ ಆದರೂ ಸಹ ಪ್ರತಿಷ್ಠಿತ ವಾಹದಲ್ಲಿ ಬೆಂಗಳೂರುವರೆಗೆ ಹಾಗೂ ಮರಳಿ ವಿಜಯಪುರ ವರೆಗೆ ಟಿಕೆಟ್ ಪಡೆಯದೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾರಿಗೆ ನೌಕರ ಕೂಟ ವಿಜಯಪುರ ವಿಭಾಗದ ಗೌರವ ಅಧ್ಯಕ್ಷ ಯಾಕೂಬ ಪಟೇಲ್ ನಾಟಿಕಾರ ಆರೋಪಿಸಿದ್ದಾರೆ.
ಅಲ್ಲದೆ ಈ ವಾಹನವನ್ನು ಹಾಲಿ ಪ್ರಭಾರಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅವರು ದುರ್ಬಳಕೆ ಮಾಡಿಕೊಳ್ಳಲು ಸಾಥ್ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಅವರು, ವಿಜಯಪುರ ವಿಭಾಗದಲ್ಲಿ ನಿವೃತ್ತ ವಿಭಾಗೀಯ ನಿಯಂತ್ರಣಾಧಿಕಾರಿ ಫೈಜ್ ಅವರನ್ನು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅಮಾನತು ಮಾಡಲಾಗಿತ್ತು ಬಳಿಕ ನಿವೃತ್ತಿ ಹೊಂದಿದ್ದಾರೆ.
ಅವರನ್ನು ಇಲಾಖಾ ವಿಚಾರಣೆ ಬಾಕಿ ಉಳಿಸಿ ಸಂಸ್ಥೆಯಿಂದ ಸದ್ಯ ಬಿಡುಗಡೆ ಗೊಳಿಸಿದ್ದು, ಈ ಬಾಕಿ ಉಳಿದಿರುವ ವಿಚಾರಣೆಯಲ್ಲಿ ಕೇಂದ್ರ ಕಚೇರಿ ಬೆಂಗಳೂರಿಗೆ ಹೋಗಲು ವಿಜಯಪುರ ವಿಭಾಗದ ಕಲ್ಯಾಣ ರಥ ಪ್ರತಿಷ್ಠಿತ ಸಾರಿಗೆ ವಾಹನವನ್ನು ಟಿಕೆಟ್ ನೀಡದೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಸಂಸ್ಥೆಯ ಸುತ್ತೋಲೆಗಳನ್ವಯ ಪ್ರತಿಷ್ಠಿತ ಸಾರಿಗೆ ವಾಹನದಲ್ಲಿ ಅಧಿಕಾರಿಗಳು ಪ್ರಯಾಣಿಸಲು ಅರ್ಥ ಟಿಕೆಟನ್ನು ಪಡೆಯಬೇಕು. ಆದಿವರು ಟಿಕೆಟ್ ಪಡೆಯದೇ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರ ಈ ಕೃತ್ಯಕ್ಕೆ ಹಾಲಿ ಪ್ರಭಾರಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅವರು ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪದ ವಿಷಯದಲ್ಲಿ ಪೂರ್ಣ ಪ್ರಮಾಣದ ತನಿಖೆ ಮಾಡಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಜರಗಿಸಬೇಕು ಇನ್ನು ಆರೋಪದ ಸತ್ಯಾಸತ್ಯತೆ ತಿಳಿಯಲು KKRTC ವ್ಯವಸ್ಥಾಪಕ ನಿರ್ದೇಶಕರು ಸಿಸಿ ಟಿವಿ ಫುಟೇಜ್ ಪಡೆದುಕೊಂಡು ಪರಿಶೀಲಿಸಬೇಕು ಎಂದು ನಾಟಿಕಾರ ಮನವಿ ಮಾಡಿದ್ದಾರೆ.