KKRTC: ತನ್ನದಲ್ಲದ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೇಳಿದ ಮಹಿಳೆ- ಪ್ರಶ್ನಿಸಿದ್ದಕ್ಕೆ ಪ್ರಜ್ಞೆ ತಪ್ಪುವವರೆಗೂ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಸಂಬಂಧಿಕರು


ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಕಲಬುರಗಿ: ಬೇರೆಯವರ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಪಡೆದುಕೊಳ್ಳಲು ಮುಂದಾದ ಮಹಿಳೆಗೆ ಇದು ನಿಮ್ಮ ಆಧಾರ ಕಾರ್ಡ್ ಅಲ್ಲ ನಿಮ್ಮದನ್ನು ಕೊಡಿ ಎಂದು ನಿರ್ವಾಹಕರು ಹೇಳಿದ್ದಕ್ಕೆ ಮಹಿಳೆ ಸಂಬಂಧಿಕರು ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ದಿನದ ಹಿಂದೆ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ಕಂಡಕ್ಟರ್ ಅರ್ಜುನ್ ಕಟ್ಟಿಮನಿ ಎಂಬುವರ ಮೇಲೆ ಹಲ್ಲೆ ಮಾಡಿದ್ದು, ಈ ಹಲ್ಲೆಯಿಂದನಿರ್ವಾಹಕರು ಪ್ರಜ್ಞೆ ತಪ್ಪಿಬಿದ್ದಿದ್ದಾರೆ.
ಘಟನೆ ವಿವರ: ಯಾದಗಿರಿಯಿಂದ ಕಲಬುರಗಿಗೆ ಬಸ್ ಬರುವಾಗ, ವಾಡಿಯ ರಾವೂರ್ ಬಳಿ ಮಹಿಳೆಯೊಬ್ಬರು ಬಸ್ ಹತ್ತಿದ್ದಾರೆ. ಈ ವೇಳೆ ಬೇರೆಯವರ ಆಧಾರ್ ಕಾರ್ಡ್ ತೋರಿಸಿ ಟೆಕೆಟ್ ಪಡೆಯಲು ಆಕೆ ಮುಂದಾಗಿದ್ದಾಳೆ. ಇದನ್ನು ಕಂಡ ನಿರ್ವಾಹಕ ನಿಮ್ಮ ಆಧಾರ್ ಕಾರ್ಡ್ ಕೊಡಿ, ಇದು ಬೇರೆಯವರ ಆಧಾರ್ ಕಾರ್ಡ್ ಎಂದಿದ್ದಾರೆ.
ಅದಕ್ಕೆ ಆ ಮಹಿಳೆ ಒಪ್ಪಿಕೊಳ್ಳೆ ಇದೇ ನನ್ನ ಆಧಾರ್ ಖಾರ್ಡ್ ಎಂದು ನಿರ್ವಾಹಕರಿಗೆ ಅವಾಜ್ ಹಾಕಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕುಪಿಗೊಂಡ ಮಹಿಳೆ ಫೋನ್ ಮಾಡಿ ತನ್ನ ಸಂಬಂಧಿಕರನ್ನು ಬಸ್ ಬರುವಷ್ಟರಲ್ಲಿ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ.
ಮಹಿಳೆ ಸಂಬಂಧಿಕರು ಬಂದು ಅವಾಚ್ಯವಾಗಿ ನಿರ್ವಾಹಕರಿಗೆ ನಿಂದಿಸಿ ಏಕಾಏಕಿ ಹಲ್ಲೆ ಮಾಡಿದ್ದಾರೆ. ವಾಡಿ ಪಟ್ಟಣಕ್ಕೆ ಬಸ್ ಆಗಮಿಸುತ್ತಿದ್ದಂತೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರಿಂದ ಕೂಡಲೇ ಪ್ರಯಾಣಿಕರು ತಡೆಯುವುದಕ್ಕೂ ಸಾಧ್ಯವಾಗಿಲ್ಲ.
ಪಾಪಿಗಳು ಹಲ್ಲೆ ಮಾಡಿದ್ದರಿಂದ ಕೆಲಕಾಲ ಪ್ರಜ್ಞೆ ತಪ್ಪಿದ ನಿರ್ವಾಹಕ ಅರ್ಜುನ್ ಕಟ್ಟಿಮನಿ ಬಳಿಕ ಚೇತರಿಸಿಕೊಂಡು ವಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅರ್ಜುನ್ ಕಟ್ಟಿಮನಿ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Related
