ಮಡಿಕೇರಿ: ಕೊಡಗಿನಲ್ಲಿ ವನ್ಯ ಪ್ರಾಣಿಗಳ ಹಾವಳಿಗೆ ಜನ ತತ್ತರಿಸಿಹೋಗುತ್ತಿದ್ದಾರೆ. ಈಗಾಗಲೇ ಕಾಡಾನೆ ಮತ್ತು ಹುಲಿಗಳು ಜನರ ಪ್ರಾಣ ತೆಗೆಯುತ್ತಿದ್ದು, ಅರಣ್ಯ ಇಲಾಖೆ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಕಾರಣ ಒಂದೆರಡು ದಿನಗಳ ಅಂತರದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ದನಕರುಗಳನ್ನು ಮೇಯಿಸುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಮುಝೀದ್ ರೆಹಮಾನ್ (55) ಎಂಬಾತನ ಮೇಲೆ ದಾಳಿ ಮಾಡಿದ ಹುಲಿ ಆತನ ಶಿರವನ್ನು ತಿಂದುಹಾಕಿದೆ.
ಇನ್ನು ಈಗಾಗಲೇ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಬೀರುಗ ಬಳಿ ಕಾಡಾನೆ ದಾಳಿಗೆ ಬೆಳೆಗಾರರೊಬ್ಬರು ಬಲಿಯಾಗಿದ್ದರು. ಆ ಘಟನೆ ಮಾಸುವ ಮುನ್ನವೇ ತಾಲೂಕಿನ ನಿಟ್ಟೂರು ಜಾಗಲೆ ಗ್ರಾಮದಲ್ಲಿ ಹುಲಿಯೊಂದು ಅಸ್ಸಾಂ ಮೂಲದ ರೆಹಮಾನ್ ನನ್ನು ಬಲಿಪಡೆದಿದೆ.
ಮುಝೀದ್ ರೆಹಮಾನ್ ಜಾಗಲೆ ಗ್ರಾಮದ ಕಾಫಿಬೆಳೆಗಾರ ಮಲಚೀರ ಅವಿನಾಶ್ ಎಂಬುವರ ಮನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಗುರುವಾರ ಸಂಜೆ ದನಕರುಗಳನ್ನು ಗದ್ದೆಯಲ್ಲಿ ಮೇಯಿಸುತ್ತಿದ್ದರು ಈ ವೇಳೆ ದಾಳಿ ಮಾಡಿದ ಹುಲಿ ಆತನನ್ನು ಬಲಿ ಪಡೆದಿದೆ.
ಕೆಲ ದಿನಗಳ ಹಿಂದಷ್ಟೇ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ತಿಂದಿದ್ದ ಹುಲಿ ದನ ಮೇಯಿಸುತ್ತಿದ್ದ ಸ್ಥಳಕ್ಕೆ ಗುರುವಾರ ಬಂದಿದ್ದು, ಅಲ್ಲಿ ದನ ಮೇಯಿಸುತ್ತಿದ್ದ ಕಾರ್ಮಿಕ ಮೇಲೆಯೇ ದಾಳಿ ಮಾಡಿ ಆತನ ಕತ್ತು ಮತ್ತು ತಲೆಭಾಗಕ್ಕೆ ಕಚ್ಚಿ ಗಾಯಗೊಳಿಸಿದ ಪರಿಣಾಮ ರೆಹಮಾನ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈಗಾಗಲೇ ಮೇಲಿಂದ ಮೇಲೆ ಜಿಲ್ಲೆಯಲ್ಲಿ ಕಾಡಾನೆ ಮತ್ತು ಹುಲಿಗಳು ದಾಳಿ ಮಾಡಿ ಜನರ ಪ್ರಾಣ ತೆಗೆಯುತ್ತಿರುವುದಕ್ಕೆ ಜಿಲ್ಲೆಯ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.