ಕೊಳ್ಳೇಗಾಲ: ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಾ ರೈತರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದ ಬಳಿ ದೊಡ್ಡ ಹಳ್ಳದಲ್ಲಿ ನಡೆದಿದೆ.
ಈ ಚಿರತೆಯು ತಾಲೂಕಿನ ಗ್ರಾಮಗಳಾದ ಸತ್ಯಗಾಲ, ಚೆಲುವನಹಳ್ಳಿ, ಧನಗೆರೆ, ಪಾಳ್ಯ, ಉಗನಿಯ, ಗುಂಡೇಗಾಲ, ಗ್ರಾಮಗಳಲ್ಲಿ ದಾಳಿ ಮಾಡಿ ಗ್ರಾಮಸ್ಥರಲ್ಲಿ ಮತ್ತು ರೈತರಲ್ಲಿ ಭಯ ಹುಟ್ಟಿಸಿತ್ತು.
ರೈತರು ಇದರಿಂದ ಜಮೀನಿಗೆ ತೆರಳಲು ಭಯಪಡುವಂತಾಗಿತ್ತು. ಈಗಾಗಲೇ ಚಿರತೆಯು ರೈತರು ಸಾಕಿದ್ದ ಮೇಕೆಗಳು ಹಾಗೂ ನಾಯಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು.
ಚಿರತೆಯ ಕಾಟದಿಂದ ಬೇಸತ್ತ ರೈತರು ಮತ್ತು ಗ್ರಾಮಸ್ಥರು ಕೂಡಲೇ ಸ್ಥಳೀಯ ಅರಣ್ಯ ಇಲಾಖೆಗಳಿಗೆ ಮಾಹಿತಿ ನೀಡಿ ಚಿರತೆಯನ್ನು ಸೆರೆಹಿಡಿಯುವಂತೆ ಮನವಿ ಮಾಡಿದ್ದರು.
ಅದರಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿ ಚಿರತೆ ಓಡಾಡುತ್ತಿರುವುದು ಖಚಿತವಾದ ಹಿನ್ನೆಲೆಯಲ್ಲಿ ಗುಂಡೇಗಾಲ ದೊಡ್ಡ ಹಳ್ಳದ ಬಳಿ ಬೋನನ್ನು ಇರಿಸಿದ್ದರು.
ಆದರೆ ಕಳೆದ ಒಂದೂವರೆ ತಿಂಗಳಿಗಳಿಂದ ಬೋನಿಗೆ ಬೀಳದೆ ತಪ್ಪಿಸಿಕೊಂಡಿದ್ದ ಚಿರತೆ ಮಂಗಳವಾರ ಬೆಳಗಿನ ಜಾವ ಬೋನಿಗೆ ಬಿದ್ದಿದ್ದು, ಇದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.