NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಹೆಚ್ಚು ಅಪಘಾತಕ್ಕೀಡಾಗುತ್ತಿರುವ ಬಸ್‌ಗಳು- ಎಂಡಿ ಅಕ್ರಮ್‌ ಪಾಷ ಕಳವಳ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹೊಸದಾಗಿ ನೇಮಕಗೊಂಡ ಚಾಲಕ ಕಂ ನಿರ್ವಾಹಕರಿಗೆ ಪರಿಣಾಮಕಾರಿ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜಿಸಲು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ ಪಾಷ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಅವರು, ಸಾರಿಗೆ ಸಂಸ್ಥೆಯ ಬಸ್‌ಗಳು ಸುರಕ್ಷತೆ ಮತ್ತು ನಂಬಿಕೆಗೆ ಪಾತ್ರವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಿಗಮದ ವಾಹನಗಳು ಹೆಚ್ಚು ಅಪಘಾತವಾಗುತ್ತಿರುವುದು ಕಳವಳಕಾರಿ. ಬಸ್‌ಗಳ ಅಪಘಾತದಿಂದಾಗಿ ಆಗುವ ಸಾವು ನೋವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜೀವ ಅಮೂಲ್ಯ. ಇದರೊಂದಿಗೆ ಸಾರ್ವಜನಿಕರಿಂದಲೂ ನಿಗಮದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರಿದು, ಹೊಸದಾಗಿ ನೇಮಕಗೊಂಡ ಚಾಲಕ ಕಂ ನಿರ್ವಾಹಕರು ಚಾಲನಾ ಪಥದಲ್ಲಿ ಚಾಲನೆ ಮಾಡಿದ್ದು ಸಾರಿಗೆ ಬಸ್‌ಗಳ ಚಾಲನೆ ಮಾಡಿರುವ ಅನುಭವವಿರುವುದಿಲ್ಲ. ಸಾರಿಗೆ ಬಸ್‌ಗಳಲ್ಲಿ ಚಾಲನಾ ವೃತ್ತಿ ನಿರ್ವಹಿಸಬೇಕಾದರೆ ಸಾರ್ವಜನಿಕ ರಸ್ತೆ ಮತ್ತು ಮಾರ್ಗಗಳ ಬಗ್ಗೆ ತಿಳಿವಳಿಕೆ ಹೊಂದಿರುವುದು ಅವಶ್ಯಕವಾಗಿದೆ. ಆದ್ದರಿಂದ ಈ ಚಾಲನಾ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವ ಕುರಿತು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.

1) ತರಬೇತಿ ಪೂರ್ಣಗೊಳಿಸಿ ಕರ್ತವ್ಯಕ್ಕೆ ಹಾಜರಾದ ಚಾಲಕ ಕಂ ನಿರ್ವಾಹಕರನ್ನು ಅವರ ಚಾಲನಾ ಕೌಶಲ್ಯತೆ ಆಧಾರದ ಮೇಲೆ ಮೂರು ವರ್ಗಗಳಲ್ಲಿ ವಿಂಗಡಣೆ ಮಾಡಿಕೊಳ್ಳುವುದು.

ವರ್ಗ A: ಉತ್ತಮ ಚಾಲನಾ ಕೌಶಲ್ಯತೆ, ಆತ್ಮ ವಿಶ್ವಾಸದಿಂದ ನಿಗಮದ ಭಾರಿ ವಾಹನ ಚಲಾಯಿಸಲು ಅರ್ಹರಿರುವ ಅಭ್ಯರ್ಥಿಗಳು. ವರ್ಗ B : ಉತ್ತಮ ಚಾಲನಾ ಕೌಶಲ್ಯತೆ ಹೊಂದಿದ್ದರೂ ಸಹ ನಿಗಮದ ಭಾರಿ ವಾಹನ ಚಾಲನೆ ಮಾಡಲು ಆತ್ಮವಿಶ್ವಾಸದ ಕೊರತೆಯಿರುವ ಅಭ್ಯರ್ಥಿಗಳು. ವರ್ಗ C: ಚಾಲನಾ ಕೌಶಲ್ಯತೆ ಮತ್ತು ಆತ್ಮವಿಶ್ವಾಸ ಕೊರತೆಯಿರುವ ಅಭ್ಯರ್ಥಿಗಳು.

2) ಮೇಲಿನ ವರ್ಗ B & C ನಲ್ಲಿರುವ ಅಭ್ಯರ್ಥಿಗಳಿಗೆ ಘಟಕ ಮಟ್ಟದಲ್ಲಿ ನುರಿತ ಚಾಲಕ ಬೋಧಕರಿಂದ ಮತ್ತು ವಿಶೇಷ ತರಬೇತಿಗಾಗಿ ತಮ್ಮ ವಿಭಾಗದ ವ್ಯಾಪ್ತಿಯ ತರಬೇತಿ ಕೇಂದ್ರದಲ್ಲಿ ಪ್ರಾಯೋಗಿಕ ತರಬೇತಿ ನೀಡಿ ಸಾರ್ವಜನಿಕ ವಾಹನ ಚಾಲನೆ ಮಾಡಲು ಕೌಶಲ್ಯತೆ ಮತ್ತು ಆತ್ಮವಿಶ್ವಾಸ ಮೂಡುವವರೆಗೆ (ಅವಧಿಯ ಬಗ್ಗೆ ಯಾವುದೇ ಮಿತಿಯಿರುವುದಿಲ್ಲ) ಅಗತ್ಯ ತರಬೇತಿ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

3) ತರಬೇತಿ ಕೇಂದ್ರಗಳ ಪಾಂಶುಪಾಲರೊಂದಿಗೆ ಪ್ರತಿಯೊಬ್ಬ ಸಿಬ್ಬಂದಿಯ ಕಾರ್ಯಕ್ಷಮತೆ ಬಗ್ಗೆ ವರದಿ ಪಡೆಯುವುದು ಹಾಗೂ ಸಮನ್ವಯ ಸಾಧಿಸಿ ತರಬೇತಿಯನ್ನು ಪರಿಣಾಮಕಾರಿಯಾಗಿ ನೀಡುವುದು. 4) ತರಬೇತಿ ಪೂರ್ಣಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಲಾದ ಅಭ್ಯರ್ಥಿಗಳನ್ನು ಚಾಲಕ ಹಾಗೂ ನಿರ್ವಾಹಕ ಎರಡೂ ಕರ್ತವ್ಯಗಳನ್ನು ಸಮರ್ಪಕವಾಗಿ ಕಲಿಯಲು ಅನುವಾಗುವಂತೆ ರೊಟೇಷನ್ ಆಧಾರದ ಮೇಲೆ ಎರಡೂ ಕರ್ತವ್ಯಗಳಿಗೆ ನಿಯೋಜಿಸುವುದು.

5) ಈ ಎಲ್ಲ ನಿರ್ದೇಶನಗಳು ಸಮರ್ಪಕವಾಗಿ ಅನುಷ್ಠಾನಗೊಂಡಿರುವ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ವೈಯಕ್ತಿಕ ಗಮನಹರಿಸಿ ಖಾತ್ರಿ ಪಡಿಸಿಕೊಳ್ಳುವುದು. 6) ವಿಭಾಗಗಳ ಉಸ್ತುವಾರಿ ಅಧಿಕಾರಿಗಳು ಸಹ ಈ ಕುರಿತು ತಮ್ಮ ವಿಭಾಗ/ ಘಟಕಗಳ ಭೇಟಿ ಸಮಯದಲ್ಲಿ ಈ ನಿರ್ದೇಶನಗಳು ಅನುಷ್ಠಾನಗೊಂಡಿರುವ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಈ ಎಲ್ಲ ನಿರ್ದೇಶನಗಳ ಬಗ್ಗೆ ಕೈಗೊಂಡ ಕ್ರಮವನ್ನು 15 ದಿನಗಳೊಳಗಾಗಿ ವರದಿ ಸಲ್ಲಿಸಬೇಕು ಎಂದು ಅಕ್ರಮ್‌ ಪಾಷ ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದಾರೆ.

 

Megha
the authorMegha

Leave a Reply

error: Content is protected !!