KSRTC: 2026ರ ಜ. 1ರಿಂದ ಶೇ.17ರಷ್ಟು ವೇತನ ಹೆಚ್ಚಳ- 14 ತಿಂಗಳ ಹಿಂಬಾಕಿ ಕೊಡಲು ಸರ್ಕಾರ ನಿರ್ಧಾರ?- ಡಿ.6ರಂದು ಘೋಷಣೆ ಸಾಧ್ಯತೆ

ಬೆಂಗಳೂರು: ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಮಾಡದೆ ವಿಳಂಬ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ ಹಣಕಾಸಿನ ಸಮಸ್ಯೆ ಆಗಿದೆ.

ವೇತನ ಬಾಕಿ (Arrears) ಪಾವತಿ ಸಮಸ್ಯೆ: ಹೌದು! 2020ರಿಂದ ಪರಿಷ್ಕರಣೆ ಬಾಕಿ ಇದ್ದು, 2023ರ ಮಾರ್ಚ್‌ನಲ್ಲಿ ಶೇ. 15ರಷ್ಟು ಹೆಚ್ಚಳಕ್ಕೆ ಆದೇಶಿಸಲಾಗಿತ್ತು. ನೌಕರರು 38 ತಿಂಗಳ ಹಿಂಬಾಕಿ (Arrears) ಪಾವತಿಗೆ ಒತ್ತಾಯಿಸುತ್ತಿದ್ದಾರೆ.
ಆರ್ಥಿಕ ಹೊರೆ: ಈ 38 ತಿಂಗಳ ಬಾಕಿ ನೀಡಿದರೆ ಸರಿ ಸುಮಾರು ₹1,800 ಕೋಟಿಗೂ ಅಧಿಕ ಹಣಕಾಸಿನ ಹೊರೆಯಾಗುವುದರಿಂದ ಸರ್ಕಾರ ಇಷ್ಟು ಮೊತ್ತವನ್ನು ಪಾವತಿಸಲು ಸಿದ್ಧವಿಲ್ಲ ಎಂದು ಹೇಳುತ್ತಿದೆ.
ಅಲ್ಲದೆ 38 ತಿಂಗಳ ಬದಲಿಗೆ 14 ತಿಂಗಳ ಬಾಕಿ ನೀಡುತ್ತೇವೆ. ಜತೆಗೆ 2026 ಜನವರಿ 1ರಿಂದ ಹೊಸ ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳುತ್ತಿದೆ.
ತಾಂತ್ರಿಕ ಮತ್ತು ಆರ್ಥಿಕ ನಿರ್ಬಂಧಗಳು: ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವ ನಿಯಮ ಕಳೆದ 57 ವರ್ಷಗಳಿಂದಲೂ ಜಾರಿಯಲ್ಲಿದ್ದರೂ ಕೂಡ ಈಗ ಸಿದ್ದರಾಮಯ್ಯ ಸರ್ಕಾರ ಕೊಡುವುದಕ್ಕೆ ಮೀನಮೇಷ ಎಣಿಸುತ್ತಿರುವುದು ಇವರ ಸರ್ಕಾರದಲ್ಲಿ ಹಣವಿಲ್ಲದಿರುವುದು ಪ್ರಮುಖ ಕಾರಣ.
ಈ ಹಿಂದೆ ನಿಗಮಗಳ ಆರ್ಥಿಕ ಪರಿಸ್ಥಿತಿ ಕೂಡ ಸರಿಯಿಲ್ಲದಿದ್ದರಿಂದ ವೇತನ ಪರಿಷ್ಕರಣೆ ಮತ್ತು ಬಾಕಿ ಪಾವತಿಗೆ ಅಡ್ಡಿಯಾಗಿದೆ. ಆದರೆ, ಪ್ರಸ್ತುತ ಸರ್ಕಾರವೇ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದು ಅವರ ಪ್ರಯಾಣದ ಟಿಕೆಟ್ ಮೌಲ್ಯದ ಹಣವನ್ನು ನಿಗಮಗಳಿಗೆ ಪಾವತಿಸಬೇಕು. ಆದರೆ, ಇದಕ್ಕೂ ಈ ಸರ್ಕಾರದ ಬಳಿ ಹಣವಿಲ್ಲ. ಇದರಿಂದ ನಿಗಮಗಳ ನೌಕರರು ಆರ್ಥಿಕ ಸಮಸ್ಯೆಗೆ ಸಿಲುಕಿದ್ದಾರೆ.
ಇನ್ನು ನಮ್ಮ ಬಳಿ ಹಣವಿದೆ ಎಂದು ಕೊಚ್ಚಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ನೌಕರರಿಗೆ ಕೊಡಬೇಕಿರುವ ಹಿಂಬಾಕಿ ಕೊಡುವುದಕ್ಕೆ ಏಕೆ ಕಾಡುತ್ತಿದ್ದಾರೆ? ಅಲ್ಲದೆ ಇಲ್ಲದ ಸಬೂಬು ಹೇಳಿಕೊಂಡು ಕಾಲವನ್ನೇಕೆ ಕಳಿಯುತ್ತಿದ್ದಾರೆ?
ಇದಕ್ಕೆ ಉತ್ತರ ಗೊತ್ತಿದ್ದರೂ ಯಾವುದೇ ಕಾಂಗ್ರೆಸ್ ನಾಯಕರು ಕೊಡುವುದಿಲ್ಲ. ಜತೆಗೆ ವಿಪಕ್ಷ ನಾಯಕರು ಹೇಳಿದರೂ ಆ ಬಗ್ಗೆ ಯಾವುದೇ ಹೋರಾಟಕ್ಕೂ ಮುಂದಾಗುತ್ತಿಲ್ಲ. ಈ ಪರಿಸ್ಥಿತಿಯಿಂದ ಇಂದು ನೌಕರರು ಅಲ್ಪ ವೇತನಕ್ಕೆ ಡ್ಯೂಟಿ ಮಾಡುವಂತಾಗಿದೆ.
ಇನ್ನು ಸರ್ಕಾರಿ ನೌಕರರಿಗಿಂತ ಹೆಚ್ಚು ವೇತನ ಪಡೆಯುತ್ತಿದ್ದ ಸಾರಿಗೆ ನೌಕರರು ಇಂದು ಅವರಿಗಿಂತ ಶೇ.35ರಿಂದ 45ರಷ್ಟು ಕಡಿಮೆ ವೇತನ ಪಡೆಯುವುದಕ್ಕೆ ಸಾರಿಗೆ ಕಾರ್ಮಿಕ ಸಂಘಟನೆಗಳ ಬೇಜವಾಬ್ದಾರಿ ಒಂದುಕಡೆಯಾದರೆ ಅಧಿಕಾರಿ ವರ್ಗ ಈವರೆಗೂ ವೇತನ ಹೆಚ್ಚಳ ಮಾಡುವ ಸಂಬಂಧ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳದಿರುವುದು ಮತ್ತೊಂದು ಪ್ರಮುಖ ಕಾರಣ.
ಈ ಎಲ್ಲದರ ನಡುವೆ ಪ್ರಸ್ತುತ ನಮಗೆ ಯಾವುದೇ ಹೋರಾಟಬೇಡ ಸರ್ಕಾರಿ ನೌಕರರಿಗೆ ಕೊಡುತ್ತಿರುವಂತೆ ಸರಿಸಮಾನ ವೇತನಕೊಡಿ ಎಂದು ಶೇ.95ಕ್ಕೂ ಹೆಚ್ಚು ಮಂದಿ ನೌಕರರು ಹಾಗೂ ಶೇ.100ಕ್ಕೆ 100ರಷ್ಟು ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದರೂ ಜಂಟಿ ಕ್ರಿಯಾ ಸಮಿತಿ ಒಪ್ಪದ ಕಾರಣ ಇದು ಇನ್ನಷ್ಟು ವಿಳಂಬಕ್ಕೆ ಕಾರಣವಾಗಿದೆ.
ಈ ನಡುವೆ ಇದೇ ನ.26ರಂದು ನಡೆದ ಸಿಎಂ ಅಧ್ಯಕ್ಷತೆಯ ಸಭೆಯಲ್ಲಿ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ನಮಗೆ 14 ತಿಂಗಳ ಹಿಂಬಾಕಿ ಬೇಡ 38 ತಿಂಗಳ ಹಿಂಬಾಕಿ ಕೊಡಬೇಕು ಜತೆಗೆ 2024ರ ಜನವರಿ 1ರಿಂದ ವೇತನ ಹೆಚ್ಚಳವಾಗಬೇಕು ಎಂಬ ಬೇಡಿಕೆ ಇಟ್ಟಿರುವುದಾಗಿ ಮಾಧ್ಯಮಗಳ ಮುಂದೆ ಬಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಸಿಎಂ ಯಾವುದೇ ಹೇಳಿಕೆ ನೀಡಿಲ್ಲ. ಅಂದರೆ ಸಭೆಯಲ್ಲಿ ನೌಕರರ ಬೇಡಿಕೆಗೆ ವಿರುದ್ಧವಾದ ನಿರ್ಧಾರವೊಂದು ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಸಾರಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಬೇಕಾಬಿಟ್ಟಿಯಾಗಿ ವರ್ತಿಸಿದ್ದಾರೆ ಎಂಬ ಮಾಹಿತಿ ಬಲ್ಲಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ ಜಂಟಿ ಕ್ರಿಯಾ ಸಮಿತಿ ಮುಖಂಡರೊಂದಿಗೂ ಇದೇ ರೀತಿ ವರ್ತಿಸಿದ್ದಾರೆ ಎನ್ನಲಾಗುತ್ತಿದೆ. ಅಂದರೆ ಇಲ್ಲಿ ಯಾವುದೇ ಸಂಘಟನೆಗಳ ಪದಾಧಿಕಾರಿಗಳಿಗೆ ಮೂರು ಕಾಸಿನ ಮರ್ಯಾದೆಯನ್ನೂ ಸಿಎಂ ಕೊಟ್ಟಿಲ್ಲ. ನಾನು ಹೇಳಿದ್ದನ್ನು ಮಾತ್ರ ಕೇಳಿ ಎಂದು ತಾಕೀತು ಮಾಡಿದ್ದಾರೆ ಎನ್ನಲಾಗುತ್ತಿದೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಇಲ್ಲಿ ಎಲ್ಲ ಸಂಘಟನೆಗಳ ಮುಖಂಡರು ಸಿಎಂ ಏನು ಹೇಳುತ್ತಾರೋ ಅದನ್ನು ಒಪ್ಪಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಇದಕ್ಕಾಗಿ ಡಿ.5 ಮತ್ತು 6ರಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆಯನ್ನು ನಾಮ್ ಕೇ ವಾಸ್ತೆ ಎಂಬಂತೆ ಮಾಡಲಾಗುತ್ತಿದೆ. ಅಂದು 2026 ಜನವರಿ ಒಂದರಿಂದ ಜಾರಿಗೆ ಬರುವಂತೆ ಶೇ.17ರಷ್ಟು ವೇತನ ಹೆಚ್ಚಳ ಹಾಗೂ 14 ತಿಂಗಳ ಹಿಂಬಾಕಿ ಕೊಡುವುದಾಗಿ ಘೋಷಣೆ ಮಾಡಲಾಗುವುದು ಎಂದು ಬಲ್ಲ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಖಚಿತತೆ ಇಲ್ಲವಾಗಿದೆ.
Related









