NEWSನಮ್ಮಜಿಲ್ಲೆನಮ್ಮರಾಜ್ಯ

KSRTC- ₹3,930 ಕೋಟಿ ದಾಖಲೆ ಆದಾಯ: ಅಸಾಧಾರಣ ವೀರರಿಂದ ದೊಡ್ಡ ಯಶಸ್ಸು- ನೌಕರರ ಶ್ಲಾಘಿಸಿದ ಎಂಡಿ ಅನ್ಬು ಕುಮಾರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶಕ್ತಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಸಕ್ತ 2023-24 ಆರ್ಥಿಕ ವರ್ಷದಲ್ಲಿ 3,930 ಕೋಟಿ ರೂಪಾಯಿ ದಾಖಲೆಯ ಆದಾಯವನ್ನು ಗಳಿಸಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮತ್ತು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ ಒಂದು ವರ್ಷ ತುಂಬುತ್ತಿದ್ದು, ಈ ಹಿನ್ನೆಲೆಯಲ್ಲಿ ಯೋಜನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ಬಲವನ್ನು ಹೆಚ್ಚಿಸಿದೆ.

ಅದಕ್ಕೆ ನಿದರ್ಶನ ಎಂಬಂತೆ ಎಂಡಿ ಅನ್ಬುಕುಮಾರ್‌ ಮಾತನಾಡಿ, ಕೆಎಸ್‌ಆರ್‌ಟಿಸಿಯ ಒಟ್ಟು ಸಂಚಾರ ಆದಾಯ 2016 ರಲ್ಲಿ 2,738 ಕೋಟಿ ರೂ ಆಗಿತ್ತು. 2017 ರಲ್ಲಿ 2,975 ಕೋಟಿ ರೂ., 2018 ರಲ್ಲಿ 3,131 ಕೋಟಿ ರೂ., 2019 ರಲ್ಲಿ 3,182 ಕೋಟಿ ರೂ, 2021 ರಲ್ಲಿ ರೂ 2,037 ಕೋಟಿ ಮತ್ತು 2022 ರಲ್ಲಿ ರೂ 3,349 ಕೋಟಿಗಳು ಬಂದಿತ್ತು. ಶಕ್ತಿ ಯೋಜನೆ ಜಾರಿಯಾದ ಬಳಿಕ ಅಂದರೆ 2023 ರ ಆದಾಯವು ರೂ 3,930 ಕೋಟಿಗೆ ಹೆಚ್ಚಳವಾಗಿದೆ ಎಂದು ವಿವರಿಸಿದ್ದಾರೆ.

2023ರ ಜೂನ್‌ನಿಂದ 2024ರ ಮೇ ವರೆಗೆ ಒಟ್ಟು 4,809 ಕೋಟಿ ರೂ.ಗಳ ಆದಾಯ ಬಂದಿದ್ದು, ಶಕ್ತಿಯೇತರ ಪ್ರಯಾಣಿಕರಿಂದಲೂ ಆದಾಯ ಹೆಚ್ಚಳವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇನ್ನು ಶಕ್ತಿಯೋಜನೆಯಿಂದ ಆದಾಯ ಶೇ.42.5 (ರೂ. 2,044 ಕೋಟಿ) ಇದ್ದರೆ, ಶಕ್ತಿಯೇತರ ಆದಾಯ ಶೇ.57.5 (ರೂ. 2,764 ಕೋಟಿ)ಯಷ್ಟಿದೆ. ಒಬ್ಬ ಮಹಿಳೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಲು ಮುಂದಾದಾದರೆ, ಮಕ್ಕಳು ಹಾಗೂ ಪತಿ ಕೂಡ ಬಸ್ ಹತ್ತುತ್ತಿದ್ದಾರೆ. ಇದರಿಂದ ಆದಾಯ ಹೆಚ್ಚಳವಾಗುತ್ತಿದೆ ಎಂದು ತಿಳಿಸಿದರು.

ಈ ಹಿಂದೆ, ನಮ್ಮ ದೈನಂದಿನ ಆದಾಯವು ಸುಮಾರು 9.7 ಕೋಟಿ ರೂಪಾಯಿಗಳಷ್ಟಿತ್ತು, ಈಗ 13.9 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ. ಇದಲ್ಲದೆ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರದಂತಹ ದಿನಗಳಲ್ಲಿ ಸಾಮಾನ್ಯವಾಗಿ ಬಸ್‌ಗಳಲ್ಲಿ ಜನಸಂಖ್ಯೆ ಶೇಕಡಾ 50-60 ರಷ್ಟಿರುತ್ತಿತ್ತು.

ಆದರೆ ಶಕ್ತಿ ಯೋಜನೆ ಬಳಿಕ ಶೇಕಡಾ 85 ಕ್ಕಿಂತ ಹೆಚ್ಚಾಗಿದೆ. ಈಗ ಬಸ್‌ಗಳಲ್ಲಿ ಜನರಿಲ್ಲದ ದಿನಗಳಿಲ್ಲದಂತಾಗಿದೆ. ಅಲ್ಲದೆ, ಪೀಕ್ ಅವರ್ ಅಲ್ಲದ ಸಮಯದಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಇವೆಲ್ಲವೂ ಆದಾಯ ಹೆಚ್ಚಳಕ್ಕೆ ಸಹಾಯ ಮಾಡಿವೆ. ಡೀಸೆಲ್ ಬೆಲೆ ಲೀಟರ್‌ಗೆ 90 ರೂ.ಗೆ ಏರುತ್ತಿದ್ದರೂ ಯಾವುದೇ ದರ ಏರಿಕೆ ಇಲ್ಲದೆ ಕೆಎಸ್‌ಆರ್‌ಟಿಸಿ ಈ ದಾಖಲೆ ಮಾಡಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ-ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC), ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು, ಮೆಕ್ಯಾನಿಕ್‌ಗಳು ಮತ್ತು ನಾಲ್ಕೂ ನಿಗಮಗಳ ಎಲ್ಲ ಸಿಬ್ಬಂದಿ ಶಕ್ತಿ ಯೋಜನೆಯನ್ನು ಯಶಸ್ವಿಗೊಳಿಸಲು ಹಗಲು ರಾತ್ರಿ ಶ್ರಮಿಸಿದ್ದಾರೆ ಎಂದರು.

ಈ ನೌಕರರ ಬೆಂಬಲವಿಲ್ಲದಿದ್ದರೆ ಈ ಯೋಜನೆ ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇವರು ಅಸಾಧಾರಣ ಹೀರೋಗಳು ಎಂದು ನಾಲ್ಕೂ ನಿಗಮಗಳ ಸಾರಿಗೆ ನೌಕರರನ್ನು ಶ್ಲಾಘಿಸಿದರು.

ನೌಕರರಿಗೆ ನ್ಯಾಯ ಸಿಗಬೇಕು: ಸಾರಿಗೆ ನಿಗಮದಲ್ಲಿ 14 ಸಾವಿರ ನೌಕರರ ಕೊರತೆ, ಈ ಕೊರತೆಯ ನಡುವಲ್ಲೂ ಯಾವುದೇ ಸಿದ್ಧತೆ ಇಲ್ಲದೆ ಶಕ್ತಿ ಯೋಜನೆ ಆರಂಭಿಸಲಾಯಿತು. ನೌಕರರು ಕೂಡ ಇಷ್ಟು ದೊಡ್ಡ ಸಂಖ್ಯೆಯ ಪ್ರಯಾಣಿಕರನ್ನು ನಿಭಾಯಿಸಬೇಕು ಎಂಬ ಬಗ್ಗೆ ಊಹಿಸಿರಲಿಲ್ಲ.

ಈ ಯೋಜನೆ ಯಶಸ್ವಿಯಾಗಲು ನೌಕರರು ಅನೇಕ ತೊಂದರೆಗಳನ್ನು ಎದುರಿಸಿದ್ದಾರೆ. ಇನ್ನು ಈ ಯೋಜನೆ ಜಾರಿಗೆ ಬಂದ ಮೇಲೆ ಅನೇಕ ನೌಕರರು ಅಮಾನತಾಗಿದ್ದಾರೆ, ಹಲ್ಲೆಗೊಳಗಾಗಿದ್ದಾರೆ, ಒತ್ತಡದಿಂದ ಜೀವ-ಜೀವನ ಕಳೆದುಕೊಂಡಿದ್ದಾರೆ ಅವರೆಲ್ಲಿಗೂ ಸೂಕ್ತ ನ್ಯಾಯ ಸಿಗಬೇಕು ಎಂದು ನೌಕರರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...