KSRTC: ಚಲಿಸುತ್ತಿದ್ದ ಬಸ್ ಡೋರ್ ಓಪನ್ ಆಗಿ ರಸ್ತೆಗೆ ಬಿದ್ದ ಯುವ ಕಂಡಕ್ಟರ್ ಮೃತ
ನಂಜನಗೂಡು: ಚಲಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನ ಹಿಂಬದಿ ಡೋರ್ ಓಪನ್ ಆದ ಪರಿಣಾಮ ಯುವ ನಿರ್ವಾಹಕರೊಬ್ಬರು ಬಿದ್ದು ಮೃತಪಟ್ಟಿರುವ ಘಟನೆ ಮಲ್ಲನಮೂಲೆ ಬಳಿ ಸಂಭವಿಸಿದೆ.
KSRTC ಸಂಸ್ಥೆಯ ಚಾಮರಾಜನಗರ ಘಟಕದ ಚಾಲಕ ಕಂ ನಿರ್ವಾಹಕ ಮಹದೇವಸ್ವಾಮಿ (35) ಮೃತರು.
ಇಂದು (ಮಾ.8) ಮುಂಜಾನೆ 6 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಉಮ್ಮತ್ತೂರಿನಲ್ಲಿ ನೈಟ್‌ಹಾಲ್ಟ್ ಆಗಿದ್ದ ಬಸ್ ಬೆಳಗ್ಗೆ 6 ಗಂಟೆಗೆ ನಂಜನಗೂಡಿಗೆ ಹೊರಟ್ಟಿತ್ತು. ಈ ವೇಳೆ ಮಲ್ಲನಮೂಲೆ ಸೇತುವೆ ಬಳಿ ತಿರುವು ತೆಗೆದುಕೊಳ್ಳುತ್ತಿದ್ದಾಗ ಬಸ್‌ನ ಹಿಂಬದಿ ಡೋರ್ ಓಪನ್‌ಆಗಿ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಬಸ್ ಡೋರ್ ಓಪನ್ ಆಗಿದ್ದರಿಂದ ಡೋರ್ ಬಳಿಯೇ ಟಿಕೆಟ್ ವಿತರಸಲು ನಿಂತಿದ್ದ ಚಾಲಕ ಕಂ ನಿರ್ವಾಹಕ ಮಹದೇವಸ್ವಾಮಿ ಅವರು ಬಸ್‌ನಿಂದ ಕೆಳಗೆ ಬಿದ್ದಿದ್ದಾರೆ. ಅವರು ಬಿದ್ದ ರಭಸಕ್ಕೆ ರಸ್ತೆಗೆ ತಲೆ ಒಡೆದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನಿಗಮದ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್‌ಗಳಲ್ಲಿ ಓಡಾಡುವ ಸಾರ್ವಜನಿಕರ ಸಂಖ್ಯೆ ಹೆಚ್ಚಳವಾಗಿದ್ದು, ಚಾಲನಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುವುದೇ ತುಂಬ ತ್ರಾಸದಾಯವಾಗುತ್ತಿದೆ. ನೂಕುನುಗ್ಗಲಿನಲ್ಲೇ ಕೆಲಸ ನಿರ್ವಹಿಸಬೇಕಿರುವುದರಿಂದ ನೌಕರರು ಮಾನಸಿಕವಾಗಿ ಕುಗ್ಗಿಹೋಗುತ್ತಿದ್ದಾರೆ.
ಇನ್ನು ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಆದರೂ ಇಂಥ ಘಟನೆಗಳಿಂದ ಚಾಲನಾ ಸಿಬ್ಬಂದಿ ಧೈರ್ಯಗುಂದುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಬಸ್ ಡೋರ್‌ಗಳು ಸರಿಯಾಗಿವೆಯೇ ಎಂಬುದರ ಬಗ್ಗೆಯೂ ಹೆಚ್ಚಿನ ಗಮನಹರಿಸಿ ಇಂಥ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ.