KSRTC: 7ನೇ ವೇತನ ಆಯೋಗ ವೇತನಶ್ರೇಣಿ ಯಥಾವತ್ತಾಗಿ ನಮಗೂ ಅಳವಡಿಸಿ- ಸಾರಿಗೆ ಸಚಿವರಿಗೆ ಅಧಿಕಾರಿಗಳು, ನೌಕರರ ಮನವಿ
ಬೆಂಗಳೂರು: ಚುನಾವಣಾ ಪ್ರಣಾಳಿಕೆ ಅಂಶ ಜಾರಿ ತರುವ ಮೂಲಕ ಏಳನೇ ವೇತನ ಆಯೋಗದ ವೇತನಶ್ರೇಣಿ ಯಥಾವತ್ತಾಗಿ ಅಳವಡಿಸಿ ಸಾರಿಗೆ ನೌಕರರಿಗೆ ಸಮಾನ ವೇತನ ದೊರಕಿಸಿಕೊಡಬೇಕೆಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಅವರಿಗೆ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಶೋಕ ಪಾಟೀಲ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ನಂತರದ ಚರ್ಚೆಯಲ್ಲಿ ಸರಕಾರದ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಸುತ್ತಿರುವ ಬಹುತೇಕ ಸಾರಿಗೆ ನೌಕರರು ವೇತನ ಆಯೋಗದಂತೆ ವೇತನ ಹೆಚ್ಚಿಸಬೇಕೆಂದು ಒಲವು/ಅಭಿಪ್ರಾಯ ತೋರಿಸಿರುವ ವಿಚಾರವನ್ನು ಸಚಿವರ ಗಮನಕ್ಕೆ ತರಲಾಯಿತು.
ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ವಾರ್ಷಿಕ ಸುಮಾರು 12000 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು ಅದರಲ್ಲಿ ಏಳನೇ ವೇತನಕ್ಕೆ ಈಗಿರುವ ವೇತನಕ್ಕೆ ಸುಮಾರು 1500 ಕೋಟಿ ಹೆಚ್ಚುವರಿಯಾಗಿ ಅಂದರೆ ಶೇ. 10 ರಿಂದ 12 ರಷ್ಟು ಹೆಚ್ಚು ಭರಿಸುವುದು ಸಾರಿಗೆ ಸಂಸ್ಥೆಗಳ ಮೇಲೆ ಅಷ್ಟೊಂದು ಹೊರೆ ಬೀಳಲಾರದು ಎನ್ನುವುದನ್ನು ಅಂಕಿ ಅಂಶಗಳ ಮೂಲಕ ಸಚಿವರ ಗಮನಕ್ಕೆ ತರಲಾಯಿತು.
ನಮ್ಮ ಎಲ್ಲ ವಿಚಾರಗಳನ್ನು ಸಮಾಧಾನಚಿತ್ತದಿಂದಲೇ ಆಲಿಸಿದ ರಾಮಲಿಂಗಾರೆಡ್ಡಿ ಅವರು ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು. ಅಲ್ಲದೆ ನೌಕರರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದು ಆದ್ಯ ಕರ್ತವ್ಯವಾಗಿದ್ದು ಆ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಉಪಾದ್ಯಕ್ಷ ಸತೀಶ, ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಉಪಾಧ್ಯಕ್ಷ ರಫೀಕ ಅಹಮದ್ ನಾಗನೂರ, ಪ್ರ.ಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿ, ಸಿಬ್ಬಂದಿ ಲೆಕ್ಕಪತ್ರ ಮೇಲ್ವಿಚಾರಕ ಅಧೀಕ್ಷಕ ಕ್ಷೇಮಾಭಿವೃದ್ದಿ ಸಂಘದ ಯಲ್ಲಪ್ಪ ದಳಪತಿ, ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರೇಣುಕಯ್ಯ ಇದ್ದರು.