ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವಿದ್ಯಾ ಸಹಾಯ ನಿಧಿಯಿಂದ ಪಾವತಿಸಲಾಗುವ ವಿದ್ಯಾರ್ಥಿ ವೇತನವನ್ನು ಪಡೆಯಲು ಆನ್ ಲೈನ್ ಮೂಲಕ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ನಿಗಮದ ಕೇಂದ್ರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಸುತ್ತೋಲೆಯನ್ವಯ ಸಂಸ್ಥೆಯ ನೌಕರರ/ಅಧಿಕಾರಿಗಳ ಅರ್ಹ ಮಕ್ಕಳಿಗೆ ವಿವಿಧ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ 2022-2023 ಹಾಗೂ 2023-2024 ರ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ನೌಕರರ ಅಧಿಕಾರಿಗಳ ಅರ್ಹ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು ಪರಿಷ್ಕರಿಸಿ vn.ksrtc.in ಪೊರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಶೈಕ್ಷಣಿಕ 2024-2025ನೇ ಸಾಲಿನ ವಿದ್ಯಾರ್ಥಿ ವೇತನ ಮೊತ್ತವನ್ನು ಪಡೆಯಲು 10.06.2024 ರಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನು ಮುಂದುವರಿದಂತೆ, 2022-2023ರ ಶೈಕ್ಷಣಿಕ ಸಾಲಿನ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ 15.06.2024 ಹಾಗೂ 2023-24ನೇ ಸಾಲಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಕೊನೆಯ ದಿನ 31.10.2024 ಆಗಿದೆ.
ಇನ್ನುಮುಂದೆ, ಪ್ರಸಕ್ತಸಾಲಿನ ಶೈಕ್ಷಣಿಕ ಅರ್ಜಿಗಳನ್ನು ಮುಂದಿನ ವರ್ಷದ ಅಕ್ಟೋಬರ್ 31ರವರೆಗೆ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಹೀಗಾಗಿ ಈ ಮಾಹಿತಿಯನ್ನು ಎಲ್ಲ ಸಿಬ್ಬಂದಿಗಳ ಗಮನಕ್ಕೆ ತರಬೇಕು ಎಂದು ನಿಗಮದ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈ ಮಾಹಿತಿಯನ್ನು ಎಲ್ಲಾ ಶಾಖಾ ಮುಖ್ಯಸ್ಥರು, ಕರಾರಸಾ.ನಿಗಮ, ಕೇಂದ್ರ ಕಚೇರಿ, ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಾರ್ಯಾಗಾರ, ಬೆಂಗಳೂರು – ಹಾಸನ – ಸಹಾಯಕ ಕಾರ್ಯ ಅಭಿಯಂತರರು, ಬೆಂಗಳೂರು – ಮೈಸೂರು- ಹಾಸನ ಹಾಗೂ ತುಮಕೂರು ಪ್ರಾಂಶುಪಾಲರು, ನಿಗಮದ ತರಬೇತಿ ಕೇಂದ್ರ, ಮಾಲೂರು- ಹಾಸನ -ಹೊಳಲ್ಕೆರೆ-ಮಳವಳ್ಳಿಯ ಅಧಿಕಾರಿಗಳು ಸಂಬಂಧಪಟ್ಟ ನೌಕರರ, ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದ್ದಾರೆ.