
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ನಲ್ಲಿ ಸಹ ಪ್ರಯಾಣಿಕರಿಗೆ ತೊಂದರೆ ಆಗುವಂತೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಹಾಕುವುದು, ಗಟ್ಟಿಯಾಗಿ ಮಾತನಾಡುವುದು, ಪಕ್ಕದಲ್ಲಿರುವವರಿಗೆ ಕಿರಿಕಿರಿ ಆಗುವಂತೆ ಸಿನಿಮಾ ನೋಡುವುದು ಹೀಗೆ ರಗಳೆಗಳನ್ನು ಮಾಡಿದರೆ ಬಸ್‌ನಿಂದ ಚಾಲಕ-ನಿರ್ವಾಹಕರು ಕಳಗಿಳಿಸುತ್ತಾರೆ ಹುಷಾರ್!
ಹೌದು! ಇದನ್ನು ತಪ್ಪಿಸಲು ಸಾರಿಗೆ ಸಂಸ್ಥೆಗಳು ಮುಂದಾಗಿದ್ದು, ಪ್ರಯಾಣಿಕರ ವಿರುದ್ಧ ಇನ್ನು ಮುಂದೆ ಬಸ್ ಚಾಲನಾ ಸಿಬ್ಬಂದಿಗಳು ಕ್ರಮ ಜರುಗಿಸುವ ಅಧಿಕಾರವನ್ನು ಹೊಂದಿದ್ದಾರೆ. ಅಲ್ಲದೆ ಅಂಥ ಪ್ರಯಾಣಿಕರನ್ನು ಬಸ್‌ನಿಂದ ಇಳಿಸಲೂ ಹೈ ಕೋರ್ಟ್ ಅದೇಶದ ಮೇರೆಗೆ ಇಲಾಖೆ ಕೂಡ ಚಾಲನಾ ಸಿಬ್ಬಂದಿಗಳಿಗೆ ಅಧಿಕಾರ ನೀಡಿದೆ.
ಹೈ ಕೋರ್ಟ್ ಸೂಚನೆ ಏನು?: ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ತೊಂದರೆಯಾಗುವಂತೆ ಮೊಬೈಲ್ ಬಳಸುವುದು ಸರಿಯಲ್ಲ. ಬಸ್‌ನಲ್ಲಿ ಪ್ರಯಾಣಿಸುವಾಗಲಂತೂ ಅನೇಕರು ಈ ಮೊಬೈಲ್ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಹೈಕೋರ್ಟ್ ವಕೀಲ ತುಮಕೂರಿನ ಎಲ್. ರಮೇಶ್ ನಾಯಕ್ ಎಂಬುವರು ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿತ್ತು. ಇದರ ಅನ್ವಯ ಇಲಾಖೆಯು ಎಲ್ಲ ಸಾರಿಗೆ ನಿಗಮಗಳಿಗೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಅದರ ಅನುಷ್ಠಾನಗೊಳಿಸಬೇಕು ಎಂದು ಖಡಕ್ ಸೂಚನೆ ನೀಡಿದೆ.
ಕೆಲವರಿಗೆ ಸೌಂಡ್ ಅಲರ್ಜಿ ಇದೆ. ಅಂಥವರು ಬಸ್‌ನಲ್ಲಿ ಪ್ರಯಾಣಿಸುವಾಗ ಭಾರಿ ಸಮಸ್ಯೆ ಅನುಭವಿಸುತ್ತಿರುತ್ತಾರೆ. ಆದರೆ ಅದನ್ನು ಹೇಳಿಕೊಳ್ಳುವುದಕ್ಕೆ ಆಗುವುದಿಲ್ಲ. ಒಂದು ವೇಳೆ ಹೇಳಿಕೊಂಡರು ಕೆಲವರು ಕಿವಿಗೆ ಹಾಕಿಕೊಳ್ಳುವುದಿಲ್ಲ. ಹೀಗಾಗಿ ಮೊಬೈಲ್ ಸೌಂಡ್ ಕಿರಿಕಿರಿ ತಪ್ಪಿಸಲು ಹಾಗೂ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಲು ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮುಲಾಜಿಲ್ಲದೆ ಬಸ್ಸಿನಿಂದ ಇಳಿಸಿ: ಕರ್ನಾಟಕ ಮೋಟಾರು ವಾಹನಗಳ ನಿಯಮಗಳು-1989, ನಿಯಮ 94(1) (ವಿ) ಅನ್ನು ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಮೊಬೈಲ್ ಮೂಲಕ ಜೋರು ಶಬ್ದ ಮಾಡುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಪ್ರಯಾಣಿಕರಿಗೆ ಕರ್ತವ್ಯ ನಿರತ ಸಿಬ್ಬಂದಿ ಸೂಕ್ತ ತಿಳಿವಳಿಕೆ ನೀಡಬೇಕು.
ಹೆಚ್ಚಾಗಿ ಶಬ್ದ ಬರದಂತೆ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಮೊಬೈಲ್ ಬಳಸುತ್ತಿದ್ದರೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ವಿರುದ್ಧವಾಗಿ ಬಳಸುತ್ತಿದ್ದರೆ ಬಳಸದಂತೆ ಚಾಲನಾ ಸಿಬ್ಬಂದಿಗಳು ಮನವಿ ಮಾಡಿ ನಿಮ್ಮ ಮನವಿಗೆ ಸ್ಪಂದಿಸದಿದ್ದರೆ ನಿಯಮಾನುಸಾರ ಚಾಲಕ ಅಥವಾ ನಿರ್ವಾಹಕರು ಬಸ್ಸಿನಿಂದ ಆ ಪ್ರಯಾಣಿಕನನ್ನು ಇಳಿಸಬೇಕು. ಆತ ಕೆಳಕ್ಕೆ ಇಳಿಯುವವರೆಗೂ ಬಸ್ಸನ್ನು ಅಲ್ಲೇ ನಿಲ್ಲಿಸಬೇಕು ಹಾಗೂ ಕೆಳಕ್ಕಿಳಿದ ಪ್ರಯಾಣಿಕಗೆ ಬಸ್ ದರವನ್ನು ಹಿಂತಿರುಗಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ವಕೀಲ ಎಲ್. ರಮೇಶ್ ನಾಯಕ್: ಇತ್ತೀಚಿನ ಜನರು ಮೊಬೈಲ್‌ಗೆ ಅವಲಂಬಿತರಾಗಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕರ ಕಡೆಗೆ ಹೆಚ್ಚು ಗಮನ ಕೊಡದೆ ತಮ್ಮಿಷ್ಟದಂತೆ ಜೋರಾಗಿ ಹಾಡು, ಸಿನಿಮಾ, ವಾರ್ತೆ ಮೊದಲಾದ ಆಡಿಯೋ ಅಥವಾ ವಿಡಿಯೋಗಳನ್ನು ಜೋರಾಗಿ ಹಾಕುವುದು ಇತರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ.
ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ತೊಂದರೆಯಾಗುವಂತೆ ಮೊಬೈಲ್ ಬಳಸುವುದು ಸರಿಯಲ್ಲ. ಬಸ್‌ನಲ್ಲಿ ಪ್ರಯಾಣಿಸುವಾಗಲಂತೂ ಅನೇಕರು ಈ ಮೊಬೈಲ್ ಕಿರಿಕಿರಿ ಅನುಭವಿಸುತ್ತಿದ್ದಾರೆ. ಆದ್ದರಿಂದ ನಾನು ಹೈಕೋರ್ಟ್‌ನಲ್ಲಿ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೈಕೋರ್ಟ್ ವಕೀಲ ತುಮಕೂರಿನ ಎಲ್. ರಮೇಶ್ ನಾಯಕ್ ತಿಳಿಸಿದ್ದಾರೆ.
