ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಗಣಕ ವ್ಯವಸ್ಥಾಪಕರಾಗಿ (ದರ್ಜೆ-1 ಕಿರಿಯ) ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಅಧಿಕಾರಿಗಳಿಗೆ ಉಪ ಮುಖ್ಯ ಗಣಕ ವ್ಯವಸ್ಥಾಪಕ (ದರ್ಜೆ-1 ಹಿರಿಯ) ಹುದ್ದೆಗೆ ಮುಂಬಡ್ತಿ ನೀಡಿ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಬುಧವಾರ ಜೂನ್ 26ರಂದು ಆದೇಶ ಹೊರಡಿಸಿದ್ದು, ಸಕ್ಷಮ ಪ್ರಾಧಿಕಾರಿಗಳ ಉಲ್ಲೇಖ-3 ರ ಆದೇಶದನ್ವಯ ಗಣಕ ವ್ಯವಸ್ಥಾಪಕರಿಗೆ (ದರ್ಜೆ-1 ಕಿರಿಯ) ಉಪ ಮುಖ್ಯ ಗಣಕ ವ್ಯವಸ್ಥಾಪಕ(ದರ್ಜೆ-1 ಹಿರಿಯ) ಹುದ್ದೆಗೆ ಮುಂಬಡ್ತಿ ನೀಡಿ ಕಾರ್ಯ ನಿರ್ವಹಣೆ (ಅಫಿಷಿಯೇಟಿಂಗ್) ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಸ್ಥಳ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಪದೋನ್ನತಿ ಪಡೆದ ಅಧಿಕಾರಿಗಳು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಗಣಕ ವ್ಯವಸ್ಥಾಪಕರಾಗಿದ್ದ ಜಿ.ಶ್ರೀನಾಥ್ ಅವರಿಗೆ ಉಪ ಮುಖ್ಯ ಗಣಕ ವ್ಯವಸ್ಥಾಪಕ (ದರ್ಜೆ-1 ಹಿರಿಯ) ಹುದ್ದೆಗೆ ಮುಂಬಡ್ತಿ ನೀಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಗಣಕ ವ್ಯವಸ್ಥಾಪಕರಾಗಿರುವ ಎ. ಪ್ರಿಯಾಂಕ ಅವರಿಗೆ ಉಪ ಮುಖ್ಯ ಗಣಕ ವ್ಯವಸ್ಥಾಪಕ (ದರ್ಜೆ-1 ಹಿರಿಯ) ಹುದ್ದೆಗೆ ಮುಂಬಡ್ತಿ ನೀಡಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲೇ ಮುಂದುವರಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಗಣಕ ವ್ಯವಸ್ಥಾಪಕರಾಗಿರುವ ಆರ್. ಸುಧಾರಾಣಿ ಅವರನ್ನು ಉಪ ಮುಖ್ಯ ಗಣಕ ವ್ಯವಸ್ಥಾಪಕರಾಗಿ ಮುಂಬಡ್ತಿ ನೀಡಿ ಸಂಸ್ಥೆಯ ಕೇಂದ್ರ ಕಚೇರಿಯಲ್ಲೇ ಮುಂದುವರಿಯಲು ಆದೇಶ ಹೊರಡಿಸಲಾಗಿದೆ.
ಇನ್ನು ಎ. ಪ್ರಿಯಾಂಕ ಮತ್ತು ಆರ್. ಸುಧಾರಾಣಿ ಅವರು ಪದವೃಂದ ಮತ್ತು ನೇಮಕಾತಿ ನಿಯಮಾವಳಿಗಳಲ್ಲಿ ನಿರ್ದಿಷ್ಟಪಡಿಸಿರುವ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್/ಅಪ್ಲಿಕೇಷನ್ ವಿದ್ಯಾರ್ಹತೆಯ ಪ್ರಮಾಣಪತ್ರವನ್ನು ಈ ಆದೇಶ ಹೊರಡಿಸಿದ ದಿನಾಂಕದಿಂದ ಒಂದು ವರ್ಷದೊಳಗೆ ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ಈ ಪದೋನ್ನತಿಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಮೂವರು ಅಧಿಕಾರಿಗಳನ್ನು ಬಡ್ತಿ ಹುದ್ದೆಯಲ್ಲಿ ಹಾಜರಾಗಲು ಅನುವಾಗುವಂತೆ 26-6-2024 ರ ಅಪರಾಹ್ನದಿಂದ ಜಾರಿಗೆ ಬರುವಂತೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಿಂದ ಬಿಡುಗಡೆಗೊಳಿಸಲಾಗಿದೆ. ಒಂದು ವೇಳೆ ಬಡ್ತಿಯನ್ನು ನಿರಾಕರಿಸುವುದಾಗಿ ಮನವಿ ಸಲ್ಲಿಸಿದ್ದಲ್ಲಿ ಸಂಸ್ಥೆಯ ಸುತ್ತೋಲೆ ಸಂಖ್ಯೆ. 1344ರ 15-7-2006 ರನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಸೂಚಿಸುವ ಮೂಲಕ ಆದೇಶ ಹೊರಡಿಸಿದ್ದಾರೆ.