ಮೈಸೂರು: ನಂಜನಗೂಡು ಸಮೀಪ ಬೆಳ್ಳಂಬೆಳಗ್ಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಶುಕ್ರವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್‌ನಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಆದರೆ ಬೆಲೆ ಬಾಳುವ ವಸ್ತುಗಳನ್ನು ಪ್ರಯಾಣಿಕರು ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
KSRTC ಕೋಜಿಕ್ಕೋಡ್ ಘಟಕದ ಬಸ್ ಬೆಂಗಳೂರು-ಕೋಜಿಕೋಡ್ ಮಾರ್ಗವಾಗಿ ಮೈಸೂರಿನಿಂದ ಕೇರಳ ಕಡೆಗೆ ಹೋಗುತ್ತಿದ್ದಾಗ ಅವಘಡಕ್ಕೆ ತುತ್ತಾಯಿತು. ಮಾಹಿತಿ ಪ್ರಕಾರ ಬಸ್‌ನ ಮುಂಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಹೊಗೆ ಎದ್ದಿದೆ ಅದನ್ನು ಗಮನಿಸಿದ ಚಾಲಕ ತಕ್ಷಣ ಎಚ್ಚೆತ್ತುಕೊಂಡು ಬಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ.
ಅಲ್ಲದೆ ಚಾಲಕ ಮತ್ತು ಸಿಬ್ಬಂದಿ ಸಮಯ ಪ್ರಜ್ಞೆಯಿಂದ ನಿದ್ರೆಯ ಮಂಪರಿನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ತಕ್ಷಣ ಎಬ್ಬಿಸಿ ಬಸ್‌ನಿಂದ ಕೆಳಗಿಳಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಬಸನ್ನೇ ವ್ಯಾಪಿಸಿ, ಸುಟ್ಟು ಕರಕಲು ಮಾಡಿತು.
ಬಸ್ ಬೆಂಕಿಗೆ ಆಹುತಿಯಾದ ನಂತರ ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಸಕಾಲಿಕ ಜಾಗರೂಕತೆಯಿಂದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದರು. ಈ ಬಸ್ ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಹೊರಟು ಮೈಸೂರು ಮತ್ತು ನಂಜನಗೂಡು ನಡುವೆ ಪ್ರಯಾಣಿಸುವಾಗ ಈ ಅವಘಡ ಸಂಭವಿಸಿದೆ.
ಆ ಸಮಯದಲ್ಲಿ ನಿದ್ರೆಗೆ ಜಾರಿದ್ದ ಪ್ರಯಾಣಿಕರನ್ನು ಕೂಡಲೇ ಎಚ್ಚರಗೊಳಿಸಿ ತಕ್ಷಣವೇ ಕೆಳಗಿಳಿಯುವಂತೆ ಕಿರುಚಿಕೊಂಡಿದ್ದಾರೆ ಚಾಲಕರು. ಈ ವೇಳೆ ಕೆಲ ಪ್ರಯಾಣಿಕರು ತಮ್ಮ ಲಗೇಜ್ ಹೊರತರಲು ಪರದಾಡಿದರು. ಕೊನೆಗೆ ಅದು ಸಾಧ್ಯವಾಗದಿದ್ದಾಗ ಬಸ್‌ನಿಂದ ಇಳಿದು ಜೀವ ಉಳಿಸಿಕೊಂಡರು.
ಈ ಘಟನೆ ನಿರ್ಜನ ಪ್ರದೇಶದಲ್ಲಿ ನಡೆದಿದ್ದು ಅಲ್ಲಿ ಯಾವುದೇ ಮನೆಗಳು ಅಥವಾ ಅಂಗಡಿಗಳಿರಲಿಲ್ಲ. ಹೀಗಾಗಿ ಬೆಂಕಿ ನಂದಿಸಲು ಯಾವುದೇ ಸೌಲಭ್ಯಗಳು ಸಿಗದೆ ಬಸ್ ಸಂಪೂರ್ಣ ಸುಟ್ಟುಹೋಗಿದೆ. ಬಸ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ತಿಳಿಯಲು ತನಿಖೆ ಆರಂಭಿಸಲಾಗಿದೆ ಎಂದು ಕೋಜಿಕ್ಕೋಡ್‌ನ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕರ ಪಾಸ್‌ಪೋರ್ಟ್, ಮೊಬೈಲ್‌ಗಳು ನಾಶ: ಈ ಘಟನೆಯಿಂದ ಹಲವಾರು ಪ್ರಯಾಣಿಕರು ತಮ್ಮ ಪಾಸ್‌ಪೋರ್ಟ್‌ಗಳು, ಮೊಬೈಲ್ ಫೋನ್‌ಗಳು, ಬ್ಯಾಗ್, ಬಟ್ಟೆಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಘಟನೆ ಬಳಿಕ ಅವರು ಬೇರೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕೋಜಿಕ್ಕೋಡ್‌ಗೆ ಪ್ರಯಾಣಿಸಿ ತಮ್ಮ ಸ್ಥಳವನ್ನು ಸರಿಕ್ಷಿತವಾಗಿ ತಲುಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Related










