ತಿಪಟೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮನೆಗೆ ಬಸ್ ನುಗ್ಗಿದ ಘಟನೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಸಿದ್ದಪುರ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಸಮೀಪವೇ ಇರುವ ಪುಟ್ಟಣ್ಣ ಎಂಬುವರ ಮನೆಗೆ ಬಸ್ ನುಗ್ಗಿದೆ. ಬಸ್ ನುಗ್ಗಿದ ರಭಸಕ್ಕೆ ಗೋಡೆ ಸಂಪೂರ್ಣವಾಗಿ ಜಖಂ ಆಗಿದೆ.
ಈ ಬಸ್ ಆಗುಂಬೆಯಿಂದ ಕೋಲಾರಕ್ಕೆ ತೆರಳುತ್ತಿತ್ತು. ಬಸ್ನ ಟೈರ್ ಬ್ಲಾಸ್ಟ್ ಆಗಿ ರಸ್ತೆ ಬದಿಯಿದ್ದ ಈ ಮನೆಗೆ ಡಿಕ್ಕಿ ಹೊಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಿದ್ದಾಪುರದ ಬಳಿ ಈ ಅವಘಡ ಸಂಭವಿಸಿದ್ದು, ಈ ವೇಳೆ ಬಸ್ನಲ್ಲಿದ್ದ 10ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನ ತಿಪಟೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಎಲ್ಲ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸೇಫಾಗಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

Related
