KSRTC: ಮೊಬೈಲ್ನಲ್ಲಿ ಮಾತನಾಡಿಕೊಂಡು ಬಸ್ ಚಾಲನೆ – ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ
ಬೆಂಗಳೂರು: ಮೊಬೈಲ್ನಲ್ಲಿ ಮಾತನಾಡಿಕೊಂಡು ಚಾಲಕ ಬಸ್ ಓಡಿಸುವ ದೃಶ್ಯವನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ, ಈ ರೀತಿ ಬೇಜವಾಬ್ದಾರಿಯ ಚಾಲಕನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ದಾವಣಗೆರೆ ಘಟಕ 1ರ KA 51 F 0067 ಸೂಪರ್ ಪ್ಲಸ್ ಎಲೆಕ್ಟ್ರಿಕ್ ಎ/ಸಿ ಬಸ್ ಇದಾಗಿದ್ದು, ಗುರುವಾರ ದಾವಣಗೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಮೊಬೈಲ್ನಲ್ಲಿ ಮಾತನಾಡುತ್ತಲೇ ಚಾಲಕ ಸುನೀಲ್ ಕುಮಾರ್ ಬಸ್ ಚಾಲನೆ ಮಾಡಿದ್ದಾರೆ.
ಮೊಬೈಲ್ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ್ದ ವಿಡಿಯೋ ಸಿಕ್ಕಿದ್ದು, ಚಾಲಕನ ಈ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ನಿರ್ಲಕ್ಷ್ಯಕ್ಕೆ ಚಾಲಕನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಈ ರೀತಿ ಮೊಬೈಲ್ ಫೋನ್ನಲ್ಲಿ ಮಾತನಾಡಿಕೊಂಡು ಬಸ್ ಓಡಿಸುವಾಗ ಏನಾದರೂ ಅವಘಡ ಸಂಭವಿಸಿದೆ ಬಸ್ನಲ್ಲಿರುವ 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಯಾವ ಮಟ್ಟದಲ್ಲಿ ತೊಂದರೆ ಆಗುತ್ತದೆ ಎಂಬುವುದನ್ನು ಊಹಿಸಿಕೊಳ್ಳುವುದಕ್ಕೂ ಅಸಾಧ್ಯವಾಗುತ್ತದೆ. ಹೀಗಾಗಿ ಆದಷ್ಟು ಫೋನ್ಗಳನ್ನು ಬಳಸದೆ ಚಾಲಕರು ತಮ್ಮ ಚಾಲನೆಯತ್ತ ಗಮನ ಹರಿಸಬೇಕಿದೆ.
ಚಾಲಕರನ್ನೇ ನಂಬಿ 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್ನಲ್ಲಿ ಅರಾಮವಾಗಿ ಪ್ರಯಾಣಿಸುತ್ತಿರುತ್ತಾರೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಚಾಲಕರು ತಮ್ಮ ಕರ್ತವ್ಯ ನಿಷ್ಠೆ ಮೆರೆದರೆ ಯಾವುದೆ ತೊಂದರೆ ಆಗುವುದಿಲ್ಲ. ಹೀಗಾಗಿ ಚಾಲನಾ ಸಿಬ್ಬಂದಿಗಳು ತಮ್ಮ ಕರ್ತವ್ಯದ ಮೇಲೆ ಹೆಚ್ಚು ಗಮನಕೊಡಬೇಕಿದೆ.