ಮಂಡ್ಯ: ಸ್ಟೇರಿಂಗ್ ರಾಡ್ ಕಟ್ಟಾಗಿ ಚಾಲಕನ ನಿಯಂತ್ರಣ ತಪ್ಪಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಟೋಲ್ ಹೆದ್ದಾರಿಯಿಂದ ಸರ್ವೀಸ್ ರಸ್ತೆ ದಾಟಿ ಹಳ್ಳಕ್ಕೆ ಬಿದ್ದಿರುವ ಘಟನೆ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮಂಡ್ಯದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಬಸ್ ಚಾಲಕ ಶೇಖರ್ ಅವರ ಕಾಲು ಮುರಿದಿದೆ. ಕಂಡಕ್ಟರ್ ರವಿಚಂದ್ರ ಸೇರಿದಂತೆ ದೀಪಕ್, ಭಾಸ್ಕರ್, ಅಭಿ, ಕುಶಾಲ್, ನಾಗರಾಜು ಎಂಬುವರು ಗಾಯಗೊಂಡಿದ್ದು ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾರಿಗೆ ಬಸ್ ರಾಗಿಮುದ್ದನಹಳ್ಳಿ ಗ್ರಾಮದ ಟೋಲ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಸ್ಟೇರಿಂಗ್ ರಾಡ್ ಕಟ್ಟಾಗಿದೆ ತಕ್ಷಣವೇ ಚಾಲಕ ಹರಸಾಹಸಪಟ್ಟು ಬಸ್ ನಿಯಂತ್ರಣಕ್ಕೆ ತೆಗೆದುಕೊಂಡರು, ಸರ್ವೀಸ್ ರಸ್ತೆಗೆ ಇಳಿದು ಹಳ್ಳಕ್ಕೆ ಬಿದ್ದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಇನ್ನು ಬಸ್ ಅಪಘಾತಕ್ಕೀಡುವ ವೇಳೆ ಕಾರು, ಮೂರು ಬೈಕ್‌ಗಳು ಜಖಂಗೊಂಡಿವೆ. ಅಲ್ಲೇ ಪಕ್ಕದಲ್ಲಿ ಅಂಗಡಿ ಹೋಟೆಲ್ ಬಳಿ ನಿಂತಿದ್ದ ರಾಗಿಮುದ್ದನಹಳ್ಳಿ ಗ್ರಾಮದ ಕೆಂಪೇಗೌಡ, ಕೋಡಿಶೆಟ್ಟಿಪುರದ ಕುಮಾರ ಅವರ ಬೈಕ್‌ಗಳಿಗೂ ಬಸ್ ಡಿಕ್ಕಿ ಹೊಡೆದುಕೊಂಡು ಹೋಗಿ ಹಳ್ಳಕ್ಕೆ ಬಿದಿದೆ.
ಈ ಎಲ್ಲ ಘಟನೆಯ ದೇಶ್ಯ ಪಕ್ಕದಲ್ಲಿದ್ದ ಕಾರದ ಪುಡಿ ಕಾರ್ಖಾನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾಲು ಮುರಿತಕ್ಕೊಳಗಾದ ಬಸ್ ಚಾಲಕ ಸೇರಿದಂತೆ ಏಳುಮಂದಿ ಗಾಯಾಳು ಪ್ರಯಾಣಿಕರನ್ನು ಮಂಡ್ಯ ನಗರ ಮಿಮ್ಸ್‌ಗೆ ಗ್ರಾಮಸ್ಥರ ಸಹಕಾರದಿಂದ ಆಂಬುಲೆನ್ಸ್‌ನಲ್ಲಿ ಕರೆತರಲಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟಕಗಳಲ್ಲಿ ಬಸ್‌ಗಳನ್ನು ಸರಿಯಾಗಿ ರಿಪೇರಿ ಮಾಡದ ಕಾರಣ ಹಾಗೂ ಬಿಡಿಭಾಗಗಳನ್ನು ಸಂಬಂಧಪಟ್ಟ ಅಧಿಕಾರಿಗಳು ನುಂಗಿ ನೀರು ಕುಡಿಯುತ್ತಿರುವ ಕಾರಣ ಇಂಥ ಅಪಘಾತಗಳು ಸಂಭವಿಸಲು ಕಾರಣವಾಗುತ್ತಿವೆ. ಆದರೂ ಸಾರಿಗೆ ಸಚಿವರ ಮತ್ತು ಎಂಡಿ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಇನ್ನು ಬಸ್‌ನ ಒಂದು ಕಿಟಕಿಯ ಗಾಜು ಒಡೆದರೂ ಕೂಡ ಅದನ್ನು ಚಾಲಕನ ವೇತನದಲ್ಲಿ ಕಟ್ ಮಾಡುವ ಮೂಲಕ ಚಾಲಕರಿಗೆ ಲಾಸ್ ಮಾಡುವ ಅಧಿಕಾರಿಗಳು ಘಟಕಕ್ಕೆ ತಿಂಗಳಿಗೆ ಬಿಡಿಭಾಗಗಳ ಖರೀದಿಗೆ ಪ್ರತಿ ತಿಂಗಳು ಬರುವ ತಲಾ 1 ಕೋಡಿ ರೂ.ಗಳನ್ನು ಕೃಷ್ಣನ ಲೆಕ್ಕ ಬರೆದು ಗುಳುಂ ಮಾಡುತ್ತಿದ್ದಾರೆ. ಇದು ನಿಂತರೆ ಬಸ್‌ಗಳು ಪ್ರಯಾಣಿಕರಿಗೆ ಮೇಲಾಗಿ ಚಾಲಕರಿಗೆ ಸುರಕ್ಷತೆ ಪ್ರಯಾಣಕ್ಕೆ ಫಿಟ್‌ಆಗರುತ್ತವೆ.
ಆದರೆ, ಭ್ರಷ್ಟ ಅಧಿಕಾರಿಗಳು ಎಲ್ಲವನ್ನು ಚಾಲಕರ ಮೇಲೆ ಹಾಕಿ ತಾವು ಬಿಡಿಭಾಗಗಳಿಗೆ ಬರುವ ಹಣವನ್ನು ತಿಂದು ತೇಗುತ್ತ ಮಜಾ ಮಾಡುತ್ತಿದ್ದಾರೆ. ಇದು ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರರ ದೌರ್ಭಾಗ್ಯವಾಗಿದೆ. ಇನ್ನಾದರೂ ಇದಕ್ಕೆ ಕಡಿವಾಣ ಬೀಳಬೇಕು ಎಂದು ನಿಗಮದ ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.