CRIMENEWSನಮ್ಮಜಿಲ್ಲೆ

KSRTC ಬಸ್‌ ಪಲ್ಟಿ: ಯುವತಿಗೆ ಕೈ ಮುರಿತ- ಒಬ್ಬರ ತಲೆಗೆ ಗಂಭೀರ ಪೆಟ್ಟು ಸೇರಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ತುಮಕೂರು: ಚಾಲಕ‌ನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಪಲ್ಟಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದರೆ, 20ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಲ್‌ಕಟ್ಟೆ ಕ್ರಾಸ್‌ ಬಳಿ ನಡೆದಿದೆ.

ಬಸ್‌ ಮಂಡ್ಯ ಸಾರಿಗೆ ವಿಭಾಗದ ಪಾಂಡವಪುರ ಘಟಕಕ್ಕೆ ಸೇರಿದ್ದಾಗಿದ್ದು, ಇಂದು (ಜುಲೈ 2ರ) ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀಗೆ ಹೋಗಿ ಪಲ್ಟಿಹೊಡೆದಿದ್ದರಿಂದ ಓರ್ವ ಯುವತಿಯ ಕೈ ಬಸ್‌ ಕೆಳಗೆ ಸಿಕ್ಕಿಹಾಕಿಕೊಂಡು ಮುರಿತಕ್ಕೊಳಗಾಗಿದ್ದರೆ, ಮತ್ತೊಬ್ಬರಿಗೆ ತಲೆಗೆ ತೀವ್ರ ಪೆಟ್ಟಾಗಿದೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.

ಗಾಯಗೊಂಡ 20ಕ್ಕೂ ಹೆಚ್ಚು ಪ್ರಯಾಣಿಕರನ್ನು ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಬೀರವಾಗಿ ಗಾಯಗೊಂಡಿರುವ 3-4 ಮಂದಿಯನ್ನು ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾಲ್‌ಕಟ್ಟೆ ಕ್ರಾಸ್‌ನಿಂದ ಸುಮಾರು 600 ಮೀಟರ್‌ ದೂರದಲ್ಲಿರುವ ಈ ಸ್ಥಳದಲ್ಲಿ ಇಂದು ನಡೆದಿರುವ ಅಪಘಾತ ಇದು 19ನೇ ಅಪಘಾತವಾಗಿದೆ. ಈ ಅವಘಡಕ್ಕೆ ರಸ್ತೆ ಡಾಂಬರೀಕರಣ ಕಳಪೆಯಾಗಿರುವುದೇ ಕಾರಣ ಎಂದು ಸ್ಥಳೀಯ ಜನಪ್ರತಿನಿಧಿಗಳು ಆರೋಪಿಸಿದ್ದು, ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು, ಇಂಜಿನಿಯರ್‌ಗಳಿಗೆ ಸರಿ ಪಡಿಸುವಂತೆ ಮನವಿ ಮಾಡಿದ್ದಾರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು ಇದೇ ಸ್ಥಳದಲ್ಲಿ ಎದರು ರಸ್ತೆಯಲ್ಲಿ ಗುಣಮಟ್ಟದ ಡಾಂಬರೀಕರಣ ಮಾಡಿರುವುದರಿಂದ ಯಾವುದೇ ಅಪಘಾತವಾಗುತ್ತಿಲ್ಲ. ಆದರೆ ಈ ರಸ್ತೆಯಲ್ಲಿ ಯಾವುದೇ ತಿರುವು ಇಲ್ಲದಿದ್ದರೂ ಕೂಡ ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತಿವೆ. ಇದರಿಂದ ಈಗಾಗಲೇ ಹಲವು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆದರೂ ಈ ಬಗ್ಗೆ ಯಾವುದೇ ದೂರು ದಾಖಲಾಗುತ್ತಿಲ್ಲ. ದೂರು ದಾಖಲಾಗುತ್ತಿದ್ದರೂ ವಿಮೆ ಕ್ಲೈ ಮಾಡಿಕೊಳ್ಳುವುದಕ್ಕಷ್ಟೇ ದಾಖಲಾಗುತ್ತಿದೆ. ಕಳಪೆ ರಸ್ತೆಯಿಂದ ಹೀಗಾಗುತ್ತಿದೆ ಎಂದು ಈವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯರು ಪೊಲೀಸರ ವಿರುದ್ಧವು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್‌ ಪಲ್ಟಿಯಾಗಿರುವುದನ್ನು ಕಂಡ‌ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಚಾಲಕ‌ನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಈ ವೇಳೆ ಬಸ್​ನಲ್ಲಿ 51ಕ್ಕೂ ಹೆಚ್ಚು ಜನ ಪ್ರಯಾಣ ಮಾಡುತ್ತಿದ್ದರು. ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಭಾರಿ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಹೇಳಿದರು.

ಅವಘಡ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!