ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರೂ ಚಾಲಕರು ಗಂಭೀರವಾಗಿ ಗಾಯಗೊಂಡ ಘಟನೆ ಚಾರ್ಮಾಡಿ ಘಾಟ್‌ನಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಅಪಘಾತವಾಗಿದ್ದು, ಇದರ ತೀವ್ರತೆಯಿಂದ ಇಬ್ಬರೂ ಚಾಲಕರು ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತಕ್ಕೆ ರಸ್ತೆ ಕಾಮಾಗಾರಿಯೇ ಕಾರಣ ಎಂದು ಹೇಳಲಾಗಿದೆ. ಇನ್ನು ಅಪಘಾತಕ್ಕೀಡಾದ 2 ಬಸ್ಸುಗಳಲ್ಲಿ 80ಕ್ಕೂ ಹೆಚ್ಚು ಜನ ಪ್ರವಾಸಿಗರು ಇದ್ದರು ಎಂದು ತಿಳಿದು ಬಂದಿದೆ.
2019ರಲ್ಲಿ ಕುಸಿದಿದ್ದ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಇನ್ನೂ ಅದು ಮುಗಿದಿಲ್ಲ. ಹಾಗಾಗಿ ಈ ಭೀಕರ ಅಪಘಾತಕ್ಕೆ ಇದುವೇ ಪ್ರಮುಖಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ರಸ್ತೆ ಕಾಮಗಾರಿಯನ್ನು ಕೂಡಲೇ ಮುಗಿಸುವಂತೆ ಆಗ್ರಹಿಸಿದ್ದಾರೆ.
ಇನ್ನೂ ಅತೀ ಹೆಚ್ಚಾಗಿ ಮಂಜು ಕವಿದಿದ್ದು, ಅವಘಡಕ್ಕೆ ಕಾರಣವಾಗಿದೆ ಎಂದು ಕೆಲವರು ಹೇಳಿದ್ದಾರೆ. ಈಗಲೂ ಕೂಡ ಚಾರ್ಮಾಡಿ ಘಾಟ್‌ನಲ್ಲಿ ಭಾರೀ ಪ್ರಮಾಣದ ಮಂಜು ಕವಿದ ಹಿನ್ನೆಲೆ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಇನ್ನುಳಿದ ವಾಹನ ಸವಾರರು ಪರದಾಡಿದ ಘಟನೆಯು ನಡೆದಿದೆ.
ಬಸ್‌ಗಳ ನಡುವೆ ಸಂಭವಿಸಿದ ಅಪಘಾತದಿಂದ ಟ್ರಾಫಿಕ್ ಜಾಮ್ ಉಂಟಾದ್ದರಿಂದ ಕೆಲ ಪ್ರಯಾಣಿಕರು 10 ಕಿ.ಮೀ. ನಡೆದು ಕೊಟ್ಟಿಗೆಹಾರ ತಲುಪಿದ್ದಾರೆ ಎಂದು ತಿಳಿದುಬಂದಿದೆ.