KSRTC: ಚಿಲ್ಲರೆಗಾಗಿ ಗಲಾಟೆ ಘಟನೆ- ಕಂಡಕ್ಟರ್‌ಗೆ ಬೈದು ರಾಜೀನಾಮೆ ಕೇಳಿದ ಡಿಸಿ ಅಶೋಕ್ ವಿರುದ್ಧ ದೂರು ದಾಖಲು
KSRTC ಚಾಮರಾಜನಗರ ಡಿಸಿ ಅಶೋಕ್ ಕುಮಾರ್ಕೊಳ್ಳೇಗಾಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳೇಗಾಲ ಘಟಕದ ಬಸ್ ನಿರ್ವಾಹಕ ಮತ್ತು ಪ್ರಯಾಣಿಕನ ನಡುವೆ ಚಿಲ್ಲರೆ ಹಣ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ವಾಹಕರ ಅವಾಚ್ಯ ಶಬ್ದಗಳಿಂದ ಬೈದು ರಾಜೀನಾಮೆ ಕೊಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಒತ್ತಡ ಹೇರುತ್ತಿ ದ್ದಾರೆ ಎಂದು ಚಾಮರಾಜನಗರ ಸಾರಿಗೆ ಡಿಸಿ ಆರ್.ಅಶೋಕ್ ಕುಮಾರ್ ವಿರುದ್ಧ ಕೊಳ್ಳೇಗಾಲ ಪಟ್ಟಣದ ಪೊಲೀಸ್ ಠಾಣೆಗೆ ನೊಂದ ಕಂಡಕ್ಟರ್ ದೂರು ನೀಡಿದ್ದಾರೆ.
KSRTC ಚಾಮರಾಜನಗರ ವಿಭಾಗದ ಕೊಳ್ಳೇಗಾಲ ಘಟಕದ ಬಸ್ ನಿರ್ವಾಹಕ ಮುನಿಮಾದಶೆಟ್ಟಿ ಅವರು ವಿಭಾಗದ ನಿಯಂತ್ರಣಧಿಕಾರಿ ಆರ್.ಅಶೋಕ್ ಕುಮಾರ್ ವಿರುದ್ಧ ದೂರು ನೀಡಿದ್ದಾರೆ.
ಮೈಸೂರಿನಿಂದ ಕೊಳ್ಳೇಗಾಲದ ಕಡೆಗೆ ಬಸ್ ( KA10-F 0197) ಬರುವಾಗ ಪ್ರಯಾಣಿಕರೊಬ್ಬರು 500 ರೂಪಾಯಿ ಕೊಟ್ಟು 63 ರೂ. ಸೀನಿಯರ್ ಟಿಕೆಟ್ ಪಡೆದುಕೊಂಡಿದ್ದಾರೆ. ಉಳಿದ ಬಾಕಿ ಹಣವನ್ನು ಕೊಡುವುದಕ್ಕೆ ಚಿಲ್ಲರೆ ಹಣ ಇಲ್ಲದಿರುವ ಬಗ್ಗೆ ತಿಳಿಸಿದ ನಿರ್ವಾಹಕ ಮುನಿಮಾದ ಶೆಟ್ಟಿ ಅವರು, ನೀವು ಯುಪಿಐ ಸ್ಕ್ಯಾನ್ ಮಾಡಿ ಆನ್‌ಲೈನ್ ಮುಖಾಂತರ ಹಣ ಕಳಿಸಿ ನಿಮ್ಮ 500 ರೂ. ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಅದಕ್ಕೆ ಸೀನಿಯರ್ ಪ್ರಯಾಣಿಕರು ಆ ವೇಳೆ ಪರವಾಗಿಲ್ಲ ಕೊಳ್ಳೇಗಾಲದಲ್ಲಿಕೊಡಿ ಎಂದು ಹೇಳಿದ್ದಾರೆ. ಆದರೆ ಈ ನಡುವೆ ಮತ್ತೆ ಮಾರ್ಗಮಧ್ಯೆ ಉತ್ತಂಬಳ್ಳಿ ಗ್ರಾಮದ ಹತ್ತಿರ ಇಳಿಯುವುದಾಗಿ ಹೇಳಿ ಚಿಲ್ಲರೆ ಕೊಡಿ ಎಂದು ನಿರ್ವಾಹಕರ ಹತ್ತಿರ ಪಟ್ಟು ಹಿಡಿದಿದ್ದಾರೆ. ಈ ವೇಳೆ ಚಿಲ್ಲರೆ ಕೊಡುವ ವಿಚಾರದಲ್ಲಿ ಒಬ್ಬರಿಗೊಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಅಲ್ಲದೆ ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕ ದೂರವಾಣಿ ಮೂಲಕ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್ ಅವರಿಗೆ ನಿರ್ವಾಹಕರ ವಿರುದ್ಧ ದೂರು ಹೇಳಿದ್ದಾರೆ. ಅವರು ಫೋನ್ ಮೂಲಕ ಮಾಡಿದ ಆರೋಪವನ್ನೇ ನಂಬಿದ ಅಶೋಕ್ ಕುಮಾರ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಬಸ್ ಘಟಕಕ್ಕೆ ಬಂದಿದ್ದಾರೆ.
ಈ ವೇಳೆ ನಿರ್ವಾಹಕ ಮುನಿಮಾದಶೆಟ್ಟಿ ಅವರನ್ನು ಕರೆಸಿಕೊಂಡ ಅಶೋಕ್ ಕುಮಾರ್, ಈ ವೇಳೆ ಬಸ್‌ನಲ್ಲಿ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳದೆ. ಜತೆಗೆ ದೂರು ಹೇಳಿದ ಪ್ರಯಾಣಿಕನನ್ನು ಕರೆಸಿಕೊಂಡು ಈ ಇಬ್ಬರಿಂದಲೂ ಸರಿಯಾದ ಮಾಹಿತಿ ಪಡೆದುಕೊಳ್ಳದೆ ಏಕಾಏಕಿ ಕಂಡಕ್ಟರ್‌ಗೆ ಅವಾಚ್ಯ ಶಬ್ದಗಳಿಂದ ಬೈದು ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದಾನೆ.

ಇದರಿಂದ ಮನನೊಂದ ನಿರ್ವಾಹಕ ಮುನಿಮಾದಶೆಟ್ಟಿ ನಾನು ಸಂಸ್ಥೆಯ ನೌಕರನಾಗಿದ್ದು ನಮ್ಮ ಹೇಳಿಕೆಯನ್ನು ಪಡೆಯದೆ ಈ ರೀತಿ ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ಬೈದು ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದಾರೆ ಎಂದು ದೂರು ನೀಡಿದ್ದು, ಈ ಸಂಬಂದ ದೂರು ಸ್ವೀಕರಿಸಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
Related








