ಬೆಂಗಳೂರು: ಮೇಲಧಿಕಾರಿಗಳ ಗಮನಕ್ಕೆ ತಾರದೆ 3ನೇ ದರ್ಜೆಯ 48 ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಿ ಕರ್ತವ್ಯ ಲೋಪ ಎಸಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರನ್ನು ಅಮಾನತು ಮಾಡಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಆದೇಶ ಹೊರಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಬಿ.ಎಸ್. ಶಿವಕುಮಾರಯ್ಯ ಎಂಬುವರೇ ಅಮಾನತುಗೊಂಡ ಅಧಿಕಾರಿ. ಇವರು ಒಟ್ಟು 48 ಸಿಬ್ಬಂದಿಗೆ ಮುಂಬಡ್ತಿ ನೀಡಿದ್ದಾರೆ. ಆದರೆ, ಈ ಮುಂಬಡ್ತಿ ನೀಡಿರುವ ವಿಷಯವೇ ಎಂಡಿ ಅವರಿಗೆ ಗೊತ್ತಿಲ್ಲ. ಹೀಗೆ ಮೇಲಧಿಕಾರಿಗಳ ಗಮನಕ್ಕೆ ತಾರದೆ ಈ ರೀತಿ ನಡೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಶಿವಕುಮಾರಯ್ಯ ಯಾವೆಲ್ಲ ಹುದ್ದೆಗೆ ಮುಂಬಡ್ತಿ ನೀಡಿದ್ದಾರೆ? ಮೂವರು ಸಿಬ್ಬಂದಿಗಳಿಗೆ ಉಗ್ರಾಣ ರಕ್ಷಕ (ದರ್ಜೆ-3) ಹುದ್ದೆಯಿಂದ ಉಗ್ರಾಣ ಅಧೀಕ್ಷಕ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಮೂವರು ಕಿರಿಯ ಅಭಿಯಂತರ (ಕಾಮಗಾರಿ) ಹುದ್ದೆಯಿಂದ ಕಿರಿಯ ಅಭಿಯಂತರ (ಕಾಮಗಾರಿ) ವಿಶೇಷ ಶ್ರೇಣಿ ಹುದ್ದೆಗೆ ಮುಂಬಡ್ತಿ ನೀಡಿದ್ದಾರೆ.
ಇಬ್ಬರಿಗೆ ಕಿರಿಯ ಅಭಿಯಂತರ (ವಿದ್ಯುತ್) ಹುದ್ದೆಯಿಂದ ಕಿರಿಯ ಅಭಿಯಂತರ (ವಿದ್ಯುತ್) ವಿಶೇಷ ಶ್ರೇಣಿ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಅದರಂತೆ 14 ಸಿಬ್ಬಂದಿಗಳಿಗೆ ಸಂಚಾರ ನಿರೀಕ್ಷ ಹುದ್ದೆಯಿಂದ ಸಹಾಯಕ ಸಂಚಾರ ಅಧೀಕ್ಷಕ ಹುದ್ದೆಗೆ. 9 ಸಿಬ್ಬಂದಿಗಳಿಗೆ ಪಾರುಪತ್ತೆಗಾರ ಹುದ್ದೆಯಿಂದ ಸಹಾಯಕ ಕಾರ್ಯ ಅಧೀಕ್ಷಕ ಹುದ್ದೆಗೆ ಮುಂಬಡ್ತಿ ನೀಡಿದ್ದಾರೆ.
ಇನ್ನು 15 ಸಿಬ್ಬಂದಿಗೆ ಸಹಾಯಕ ಉಗ್ರಾಣ ರಕ್ಷಕ ಹುದ್ದೆಯಿಂದ ಉಗ್ರಾಣ ರಕ್ಷಕ ಹುದ್ದೆಗೆ. ಇಬ್ಬರಿಗೆ ಕಿರಿಯ ಶೀಘ್ರಲಿಪಿಗಾರ ಹುದ್ದೆಯಿಂದ ಹಿರಿಯ ಶೀಘ್ರಲಿಪಿಗಾರ ಹುದ್ದೆಗೆ ಹೀಗೆ ಒಟ್ಟು 48 ಸಿಬ್ಬಂದಿಗೆಳಿಗೆ ಮುಂಬಡ್ತಿ ನೀಡಿ ಹಾಗೂ ಮುಂಬಡ್ತಿ ಹೊಂದಿದ ಸಿಬ್ಬಂದಿಗಳಿಗೆ ಸ್ಥಳ ನಿಯೋಜನೆ ಮಾಡಿ ಶಿವಕುಮಾರಯ್ಯ ಆದೇಶ ಹೊರಡಿಸಿದ್ದಾರೆ.
ಹೀಗೆ ಕೇಂದ್ರ ಕಚೇರಿಯ ಮಟ್ಟದಲ್ಲಿ ನೀಡಲಾಗುವ ಮುಂಬಡ್ತಿ ಪ್ರಕ್ರಿಯೆಯ ಪ್ರಮುಖ ವಿಷಯವನ್ನು ವ್ಯವಸ್ಥಾಪಕ ನಿರ್ದೇಶಕ ಗಮನಕ್ಕೆ ತಾರದೇ ಅಪ್ರಾಮಾಣಿಕವಾಗಿ ಶಿವಕುಮಾರಯ್ಯ ನಡೆದುಕೊಂಡಿದ್ದು ಅಲ್ಲದೆ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ತನ್ಮೂಲಕ ಗಂಭೀರ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಅಪಾದನಾ ಪತ್ರವನ್ನು ಎಂಡಿ ಜಾರಿ ಮಾಡಿದ್ದಾರೆ.
ಅಲ್ಲದೆ ಇದನ್ನು ಗಮನಿಸಿದಾಗ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಶಿವಕುಮಾರಯ್ಯ ತಮ್ಮ ಅಧೀನ ಸಿಬ್ಬಂದಿಗಳಿಗೆ ಮಾದರಿಯಾಗಿರದೆ ತಮ್ಮ ವರ್ತನೆಯಿಂದ ಸಮಗ್ರತೆಯನ್ನು ಹಾಗೂ ಕರ್ತವ್ಯ ನಿಷ್ಠೆಯನ್ನು ಕಾಪಾಡಲು ವಿಫಲರಾಗಿ ಸಂಸ್ಥೆಯ ನೌಕರರಿಗೆ ತರವಲ್ಲದ ಕೃತ್ಯವೆಸಗಿ ದುರ್ನಡತೆ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಪ್ರಕರಣದ ಸುಗಮ ತನಿಖೆಯ ದೃಷ್ಟಿಯಿಂದ ಪ್ರಕರಣದಲ್ಲಿ ಮುಂದಿನ ತನಿಖೆ/ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತು ಮಾಡಿ ಎಂಡಿ ಆದೇಶ ಹೊರಡಿಸಿದ್ದಾರೆ.
ಲಂಚಕೊಟ್ಟರೆ ಮುಂಬಡ್ತಿ!?: ಸಂಸ್ಥೆಯಲ್ಲಿ 25 ಸಾವಿರ, 50 ಸಾವಿರ ಹಾಗೂ 1 ಲಕ್ಷ ರೂಪಾಯಿ ಕೊಟ್ಟರೆ ಅತೀ ಶೀಘ್ರದಲ್ಲೇ ಮುಂಬಡ್ತಿ ಪಡೆಯಬಹುದು ಎಂದು ಕೆಲ ನೌಕರರು ಆರೋಪಿಸುತ್ತಿದ್ದರು. ಆದರೆ ಅದಕ್ಕೆ ಯಾವುದೇ ಸರಿಯಾದ ನಿದರ್ಶನ ಸಿಕ್ಕಿಲ್ಲ. ಈಗ ಇದನ್ನು ಗಮನಿಸಿದರೆ ಶಿವಕುಮಾರಯ್ಯ ಅವರು ಲಂಚ ಪಡೆದು ಈ ರೀತಿ ಮುಂಬಡ್ತಿ ನೀಡಿದ್ದಾರೆಯೇ ಎಂಬ ಅನುಮಾನ ನೌಕರರಲ್ಲಿ ಮೂಡಿದೆ.
ಶಿವಕುಮಾರಯ್ಯ ನಿಗಮದ ಬೆಂಗಳೂರು ಕೇಂದ್ರ ಕಚೇರಿಯಲ್ಲಿದ್ದುಕೊಂಡೆ ವಿವಿಧ ಹುದ್ದೆಯಲ್ಲಿರುವ 48 ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಿದ್ದಾರೆ ಎಂದರೆ ಇದರಲ್ಲಿ ಘಟಕ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಅನುಮಾನ ಮೂಡದೆ ಇರದು. ಹೀಗಾಗಿ ಎಂಡಿ ಅನ್ಬುಕುಮಾರ್ ಅವರು ಈ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿಸಿ ತಪ್ಪು ಮಾಡಿದ ಅಧಿಕಾರಿಗಳನ್ನು ಶಿಕ್ಷಿಸಲು ಯಾವುದೇ ಒತ್ತಡಕ್ಕೂ ಒಳಗಾಗಬಾರದು ಎಂದು ಹೆಸರೇಳಲಿಚ್ಛಿದ ಅಧಿಕಾರಿಯೊಬ್ಬರು ಮನವಿ ಮಾಡಿದ್ದಾರೆ.
ಇನ್ನು ಇದು ಸಮಾನ್ಯ ಲೋಪವಲ್ಲ ಇದರ ಹಿಂದೆ ಯಾರಯಾರ ಕೈವಾಡವಿದೆಯೋ ಗೊತ್ತಿಲ್ಲ. ಇದನ್ನು ಸಿಒಡಿ ತನಿಖೆಗೆ ವಹಿಸಬೇಕು ಎಂದು ಸುಪ್ರೀಂಕೋರ್ಟ್ ಮತ್ತು ಹೈ ಹೋರ್ಟ್ ವಕೀಲರೊಬ್ಬರು ಒತ್ತಾಯಿಸಿದ್ದಾರೆ.