
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 2020ರ ಜನವರಿ 1ರಿಂದ ಅನ್ವಯವಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಆಗಬೇಕಿರುವ ಬಗ್ಗೆ ಚರ್ಚಿಸಲು ಏ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಮಿಕ ಸಂಘಟನೆಗಳ ಸಭೆ ಕರೆದಿದ್ದಾರೆ.
ಈ ಸಂಬಂದು ಇಂದು ಸರ್ಕಾರದ ಅಧೀನ ಕಾರ್ಯದರ್ಶಿ, ಸಾರಿಗೆ ಇಲಾಖೆಯ ವಿ.ಎಸ್.ಪುಷ್ಪ ಅವರು ನಾಲ್ಕೂ ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳ ಕುರಿತು ಚರ್ಚಿಸುವ ಸಂಬಂಧ ಏಪ್ರಿಲ್ ಒಂದರೊಳಗೆ ಅಗತ್ಯ ಮಾಹಿತಿ ಒದಗಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅವರು ಪತ್ರ ಇದೇ ಮಾ.10ರಂದು ನೌಕರರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ.
ಈ ಉಲ್ಲೇಖಿತ ಪತ್ರದಲ್ಲಿ ಕೋರಿರುವಂತೆ ನಾಲ್ಕೂ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಬೇಡಿಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು 05.04.2025ರಂದು ಬೆಳಗ್ಗೆ 11 ಗಂಟೆಗೆ ಸಭೆ ಆಯೋಜಿಸಲು ಒಪ್ಪಿದ್ದಾರೆ.
ಆದ್ದರಿಂದ, ಈ ಸಭೆ ನಡೆಸಲು ಎಲ್ಲ ಸೂಕ್ತ ಸಿದ್ಧತೆ ಹಾಗೂ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು, ತತ್ಸಂಬಂಧದ ಮಾಹಿತಿಯನ್ನು 01.04.2025ರೊಳಗಾಗಿ ತಪ್ಪದೇ ಸರ್ಕಾರಕ್ಕೆ ಒದಗಿಸುವಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಎಸ್.ಪುಷ್ಪ ತಿಳಿಸಿದ್ದಾರೆ.
ಕಳೆದ 2020ರ ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಇನ್ನು ನೌಕರರಿಗೆ ಸಿಕ್ಕಿಲ್ಲ. ಜತೆಗೆ ಈಗಾಗಲೇ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆಯ ಅವಧಿ ಮುಗಿದು 14 ತಿಂಗಳು ಕಳೆದರೂ ಆ ಬಗ್ಗೆಯೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ನೌಕರರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಕ್ಕೆ ಇಂದು ಕನ್ನಡ ಭವನದಲ್ಲಿ ಸಭೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಏ.5ರಂದು ಕಾರ್ಮಿಕ ಸಂಘಟನೆಗಳ ಸಭೆ ಕರೆದಿದ್ದು ಖುದ್ದು ಮುಖ್ಯಮಂತ್ರಿಗಳೇ ಮುಖಂಡರೊಂದಿಗೆ ಚರ್ಚಿಸಲು ಸಭೆ ಕರೆದಿದ್ದಾರೆ. ಇನ್ನು ಸಭೆಯಲ್ಲಿ ಸರ್ಕಾರ ಚುನಾವಣಾ ಪೂರ್ವದಲ್ಲಿ ನೌಕರರಿಗೆ ಕೊಟ್ಟಿರುವ ಸರಿ ಸಮಾನ ವೇತನ ಕೊಡಲು ಒಪ್ಪುತ್ತದೋ ಇಲ್ಲ 4ವರ್ಷಗಳಿಗೊಮ್ಮೆ ನಡೆಯುತ್ತಿರುವ ವೇತನ ಪರಿಷ್ಕರಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೋ ಎಂಬುದನ್ನು ಕಾದು ನೋಡಬೇಕಿದೆ.