ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮಹಿಳೆ ಸೇರಿದಂತೆ ಮೂವರ ವಿರುದ್ಧ ಜಿಲ್ಲೆಯ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಶಿಕಾರಿಪುರ ತಾಲೂಕಿನ ಕೋಟಿಪುರ ಗ್ರಾಮದ ನಿವಾಸಿಗಳಾದ ಕೃಷ್ಣಮೂರ್ತಿ, ಹನುಮಂತಪ್ಪ ಹಾಗೂ ರಂಜಿತಾ ಎಂಬುವರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಶಿಕಾರಿಪುರ ಘಟಕದಲ್ಲಿ ಕಂಡಕ್ಟರ್ ತನ್ವೀರ್ ಹೊರಕೆರೆ ಎಂಬುವರೆ ಹಲ್ಲೆಗೊಳಗಾದವರಾಗಿದ್ದು, ಕರ್ತವ್ಯದ ವೇಳೆ ಹಲ್ಲೆ ಮಾಡಿದ ಈ ಮೂವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆ ದೂರಿನ ಆಧಾರದ ಮೇರೆಗೆ ಆರೋಪಿಗಳ ವಿರುದ್ಧ FIR ದಾಖಲಾಗಿದೆ.
ಘಟನೆ ವಿವರ: ಕಂಡಕ್ಟರ್ ತನ್ವೀರ್ ಹೊರಕೆರೆ ಅವರು ಶಿಕಾರಿಪುರ ಘಟಕದಲ್ಲಿ ಕಂಡಕ್ಟರ್ ಆಗಿದ್ದು, ಎಂದಿನಂತೆ ಸೆ.17 ರಂದು (ಕೆಎ 17 ಎಫ್ 1723) ಬಸ್ಸಿನಲ್ಲಿ ಶಿಕಾರಿಪುರ- ಮುಡುಬಾಸಿದ್ದಾಪುರ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅಂದು ಸಂಜೆ 4.30ರ ಸಮಯದಲ್ಲಿ ಶಿಕಾರಿಪುರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಹತ್ತುತ್ತಿದ್ದರು.
ಈ ವೇಳೆ ಕೆಲವು ಶಾಲಾ ಮಕ್ಕಳು ಡ್ರೈವರ್ ಸಿಟಿನ ಕಡೆ ಇರುವ ಬಾಗಿಲಿನಿಂದ ಬಸ್ ಹತ್ತುತ್ತಿದ್ದು, ಆಗ ಕಂಡಕ್ಟರ್ ತನ್ವೀರ್ ಶಾಲಾ ಮಕ್ಕಳಿಗೆ ಡ್ರೈವರ್ ಸಿಟಿನ ಬಾಗಿಲಿನಿಂದ ಹತ್ತಬೇಡಿ ಅಂತಾ ಹೇಳಿ ಮಕ್ಕಳನ್ನು ಕೆಳಗೆ ಇಳಿಸಿದ್ದಾರೆ.
ಬಳಿಕ ಪ್ರಯಾಣಿಕರು ಮತ್ತು ಶಾಲಾ ಮಕ್ಕಳನ್ನು ಹತ್ತಿಸಿಕೊಂಡು ಶಿಕಾರಿಪುರದಿಂದ ಕಪ್ಪನಹಳ್ಳಿ ಮಾರ್ಗವಾಗಿ ಮುಡುಬಾಸಿದ್ದಾಪುರಕ್ಕೆ ಹೋಗಿ ವಾಪಸ್ ಶಿಕಾರಿಪುರಕ್ಕೆ ಬಸ್ ಬರುತ್ತಿದ್ದಾಗ, ಸಂಜೆ 6.30ರ ಸಮಯದಲ್ಲಿ ಕೋಟಿಪುರ ಬಸ್ ನಿಲ್ದಾಣದ ಹತ್ತಿರ ಈ ಮೂವರು ಆರೋಪಿಗಳು ಬಸ್ ಸುತ್ತುವರೆದು, ತನ್ವೀರ್ ಅವರನ್ನು ಕೆಳಗೆ ಇಳಿಸಿ ಏನೋ ಸೂ* ಮಗನೇ, ಬೋಳ* ಮಗನೆ ಎಂದು ಅವಾಚ್ಯವಾಗಿ ಬೈದಿದ್ದು ಅಲ್ಲದೇ, ಕಪಾಳಕ್ಕೆ, ಎದೆಗೆ, ಬೆನ್ನಿಗೆ ಕಿವಿಗೆ ಹೊಡೆದು ಹಲ್ಲೆ ಮಾಡಿದ್ದಾರೆ.

ಆಗ ಅಲ್ಲೇ ಇದ್ದ ಬಸ್ ಡ್ರೈವರ್ ಬಸವರಾಜಪ್ಪ ಗಲಾಟೆ ಬಿಡಿಸಿದ್ದು, ನಂತರ ತನ್ವೀರ್ ಅದೇ ಬಸ್‌ನಲ್ಲಿ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ, ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ತನ್ವೀರ್ ಅವರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ, ಅವಾಚ್ಯವಾಗಿ ಬೈದು, ಹಲ್ಲೆ ಮಾಡಿದ ಈ ಮೂವರು ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡು FIR ಮಾಡಿರುವ ಪೊಲೀಸರು ಆರೋಪಿಗಳ ವಿರುದ್ಧ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ತನ್ವೀರ್ FIR ಶಿಕಾರಿಪುರ
Related
