KSRTC ಚಿಲ್ಲರೇ ಗಲಾಟೆ: ಸಂಸ್ಥೆ ನೌಕರನ ವಿರುದ್ಧ ಮೃಗದಂತೆ ವರ್ತಿಸಿ ರಾಜೀನಾಮೆ ಕೇಳಿದ ವಿಭಾಗೀಯ ನಿಯಂತ್ರಣಾಧಿಕಾರಿ

- ನಾಲ್ಕೂ ಸಾರಿಗೆ ನಿಗಮಗಳ ನೌಕರರು ಹಾಗೂ ಸಂಘಟನೆಗಳ ಬಳಿ ನೋವು ತೋಡಿಕೊಂಡ ನೊಂದ ನೌಕರ
ಕೊಳ್ಳೇಗಾಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳೇಗಾಲ ಘಟಕದ ಬಸ್ ನಿರ್ವಾಹಕ ಮತ್ತು ಪ್ರಯಾಣಿಕನ ನಡುವೆ ಚಿಲ್ಲರೆ ಹಣ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ವಾಹಕರ ಅವಾಚ್ಯ ಶಬ್ದಗಳಿಂದ ಬೈದು ರಾಜೀನಾಮೆ ಕೊಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಒತ್ತಡ ಹೇರುತ್ತಿ ದ್ದಾರೆ ಎಂದು ಚಾಮರಾಜನಗರ ಸಾರಿಗೆ ಡಿಸಿ ಆರ್.ಅಶೋಕ್ ಕುಮಾರ್ ವಿರುದ್ಧ ಕೊಳ್ಳೇಗಾಲ ಪಟ್ಟಣದ ಪೊಲೀಸ್ ಠಾಣೆಗೆ ನೊಂದ ಕಂಡಕ್ಟರ್ ದೂರು ನೀಡಿದ್ದಾರೆ.
ಈ ಘಟನೆ ನಡೆದ ಸಂಬಂಧ ವಿಭಾಗೀಯ ನಿಯಂತ್ರಣಾಧಿಕಾರಿ ಒಬ್ಬ ಸಂಸ್ಥೆಯ ಅಧಿಕಾರಿಯಾಗಿ ತನ್ನ ಸಂಸ್ಥೆಯ ನೌಕರನನ್ನೇ ಬಿಟ್ಟುಕೊಟ್ಟು ಅವರ ವಿರುದ್ಧವೇ ನಡೆದುಕೊಂಡ ನಡೆಯ ಬಗ್ಗೆ ಭಾರಿ ನೊಂದುಕೊಂಡಿರುವ ನಿರ್ವಾಹಕ ಮುನಿಮಾದಶೆಟ್ಟಿ ಅವರು ಸಮಸ್ತ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಹಾಗೂ ನಿಗಮಗಳ ಸಂಘಟನೆಯವರಿಗೆಒಂದು ಪತ್ರ ಬರೆದು ತಮಗಾದ ನೋವನ್ನು ಅದರಲ್ಲಿ ತೋಡಿಕೊಂಡಿದ್ದಾರೆ.
ಮುನಿಮಾದಶೆಟ್ಟಿ ಅವರು ಬರೆದ ಪತ್ರದಲ್ಲೇನಿದೆ?: ನಮಸ್ಕಾರಗಳು, ನನ್ನ ಎಲ್ಲ ಆತ್ಮೀಯ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಹಾಗೂ ಸಂಘಟನೆಯವರಿಗೆ ಕೊಳ್ಳೇಗಾಲ ಘಟಕ ಮುನಿಮಾದಶೆಟ್ಟಿ ಚಾಲಕ ಕಮ್ ನಿರ್ವಾಹಕ (ಬಿಲ್ಲೆ ಸಂಖ್ಯೆ 1667) ಆದ ನಾನು ಎಲ್ಲ ಮುಖಂಡರಿಗೂ ತಿಳಿಯಬಯಸುವ ವಿಷಯವೆಂದರೆ.
ಇದೇ ಸೆ.8ರಂದು ಮಾರ್ಗ ಸಂಖ್ಯೆ 97 ಎಬಿ ಈ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮೈಸೂರಿನಿಂದ ಕೊಳ್ಳೇಗಾಲಕ್ಕೆ ಬರುವಾಗ ಪ್ರಯಾಣಿಕನ ಹತ್ತಿರ ಟಿಕೆಟ್ ಕೇಳುವಾಗ ಸೀನಿಯರ್ ಸಿಟಿಜನ್ ಮೈಸೂರಿನಿಂದ ಕೊಳ್ಳೇಗಾಲಕ್ಕೆ 63 ರೂಪಾಯಿ ಆಗಿರುತ್ತದೆ. ಅವರು 500 ರೂಪಾಯಿ ಕೊಟ್ಟರು ಈ ವೇಳೆ ನಿರ್ವಾಹಕ ಆದ ನಾನು ಸರ್ ನನ್ನತ್ರ ಚೇಂಜ್ ಇಲ್ಲ ಆದ್ದರಿಂದ ಯುಪಿಐ ಮುಖಾಂತರ ಸ್ಕ್ಯಾನ್ ಮಾಡಿ ಹಣ ಹಾಕಿ ಎಂದು ಹೇಳಿದಾಗ ನನ್ನ ಹತ್ತಿರ ಸ್ಕ್ಯಾನ್ ಇಲ್ಲ ನೀವು ಕೊಳ್ಳೇಗಾಲ ನಿಲ್ದಾಣದಲ್ಲಿ ಕೊಡಿ ಎಂದು ಹೇಳಿದರು.
ಆಗ ನಾನು ಆಯ್ತು ಸರ್ ಅಂತ ಬಂದು ನನ್ನ ಹಾಸನದಲ್ಲಿ ಕುಳಿತಿದ್ದೆ, ನಂತರ ಕೊಳ್ಳೇಗಾಲದ ಹಿಂದೆ ಉತ್ತಂಬಳ್ಳಿ ಹತ್ತಿರ ಇಳಿಯುತೇನೆ ನನಗೆ ಚೇಂಜ್ ಕೊಡು ಎಂದು ಕೇಳಿದರು ನನ್ನ ಹತ್ತಿರ ಚೆಂಜ್ ಇಲ್ಲ ಕೊಳ್ಳೇಗಾಲ ನಿಲ್ದಾಣದಲ್ಲಿ ಕೊಡುತ್ತೇನೆ ಬನ್ನಿ ಎಂದು ಹೇಳಿದೆ ಆಗ ನಾನು ಅಲ್ಲಿವರೆಗೂ ಬರೋದಿಲ್ಲ ನಾನು ಏನು ಮಾಡಬೇಕು ಮಾಡುತ್ತೇನೆ ಎಂದು ನನಗೆ ಬೆದರಿಕೆ ಹಾಕಿದರು. ನಂತರ ನಾನು ಡಿಪ್ಲೋಗೆ ಬಂದು ಕರ್ತವ್ಯ ಮುಗಿಸಿಕೊಂಡು ಹೋಗುವಾಗ ಬಸ್ಸಿನಲ್ಲಿ ಬಂದ ಪ್ರಯಾಣಿಕ ನಮ್ಮ ವಾಹನದ ಸಂಖ್ಯೆ ಮತ್ತು ನನ್ನನ್ನು ವಿಡಿಯೋ ಮಾಡಿಕೊಂಡು ಚಾಮರಾಜನಗರದ ನಿಯಂತ್ರಣ ಅಧಿಕಾರಿ ಅಶೋಕ್ ಕುಮಾರ್ ಅವರಿಗೆ ಫೋನ್ ಮುಖಾಂತರ ಕಳಿಸ್ತಿರೋದು ಕಂಡು ಬಂದಿತು.
ಈ ವೇಳೆ ನಿಯಂತ್ರಣ ಅಧಿಕಾರಿಯವರು ಘಟಕದಲ್ಲೇ ಇದ್ದು ನನ್ನನ್ನು ಘಟಕದ ವ್ಯವಸ್ಥಾಪಕ ಕೊಠಡಿಗೆ ಕರೆಸಿದರು. ಆಗ ಏನಪ್ಪಾ ಅಂತ ಕೇಳಿದಾಗ ನಾನು ವಿವರಣೆಯನ್ನು ನೀಡುವಾಗ ಸಂಪೂರ್ಣ ಮಾಹಿತಿಯನ್ನು ನನ್ನ ಹತ್ತಿರ ಕೇಳಲಿಲ್ಲ ಅವಾಗ ಅವರೇ ಮಾತನಾಡುತ್ತಿದ್ದರು. ಅದಕ್ಕೆ ನಾನು ನನ್ನ ಮೇಲೆ ಆರೋಪ ಮಾಡಿರುವ ಪ್ರಯಾಣಿಕನನ್ನು ಕರೆಸಿ ವಿಚಾರಮಾಡಿ ಎಂದು ಕೇಳಿದೆ.

ಆಗ ಅವರನ್ನು ಕರಿಸದೆ ಮತ್ತು ನನ್ನ ಸಂಪೂರ್ಣ ಮಾಹಿತಿಯನ್ನು ಕೇಳದೆ ಏಕಾಏಕಿಯಾಗಿ ನನ್ನ ಮೇಲೆ ದಾಳಿಮಾಡಿ ಅಸಭ್ಯ ಶಬ್ದವನ್ನು ನಿಂದಿಸಿ ನೀನು ಏನು ಡ್ಯೂಟಿ ಮಾಡುವುದು ಹೋಗೋ ಲೋಫರ್ ಎಂದು ನನ್ನ ಹತ್ತಿರ ಹೆಚ್ಚು ಹೊತ್ತು ನಿಂತುಕೊಳ್ಳಬೇಡ ಹೋಗು ಎಂದು ಹೇಳಿದರು. ಅಲ್ಲದೆ ನೀನು ಹೋಗುವಾಗ ರಾಜೀನಾಮೆ ಕೊಟ್ಟು ಹೋಗೋ ಲೋಫರ್ ಎಂದು ನಿಂದಿಸಿದರು.
ಅದಕ್ಕೆ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಇನ್ನು ನನ್ನ ಪರವಾಗಿ ಯಾವುದೇ ಸಾಕ್ಷಿಗೂ ನಮ್ಮ ಸಹೋದ್ಯೋಗಿಗಳು ಬರುವುದಕ್ಕೆ ಆಗುವುದಿಲ್ಲ ಮತ್ತು ಮುಖ್ಯವಾಗಿ ಹೇಳುವುದೇನೆಂದರೆ ಒಬ್ಬ ಅಧಿಕಾರಿ ವಿರುದ್ಧ ನೌಕರರು ಯಾರು ಸಹ ಸಾಕ್ಷಿಗೆ ಬರುವುದಿಲ್ಲ. ಆದ್ದರಿಂದ ಕಾನೂನಾತ್ಮಕವಾಗಿ ಕಾನೂನು ಮುಖಾಂತರ ಕೊಳ್ಳೇಗಾಲದ ಟೌನ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದೇನೆ.
ಹೀಗಾಗಿ ನನ್ನ ಎಲ್ಲ ಸಾರಿಗೆ ಸಂಘಟನೆಯವರಿಗೆ ಕೈಮುಗಿದು ಕೇಳಿಕೊಳ್ಳುವುದೇನೆಂದರೆ ಬೇರೆ ಯಾರಿಗೂ ಯಾವುದೇ ನನ್ನ ನಾಲ್ಕೂ ಸಾರಿಗೆ ನಿಗಮದ ನೌಕರರಲ್ಲಿ ಯಾರಿಗಾದರೊಬ್ಬರಿಗೂ ಈ ರೀತಿ ತೊಂದರೆ ಆಗದೆ ಇರಲಿ. ದಯವಿಟ್ಟು ಇನ್ನಾದರೂ ನಮ್ಮ ಸಾರಿಗೆ ನೌಕರರ ಪರವಾಗಿ ಎಲ್ಲ ಸಂಘಟನೆಗಳು ಒಂದಾಗಿ ನನ ಪರವಾಗಿ ನಿಂತು ನ್ಯಾಯ ದೊರಕಿಸಿ ಕೊಡಿ ಎಂದು ಕೇಳಿಕೊಳ್ಳುತ್ತೇನೆ.
ಇಂತಿ ನೊಂದ ನೌಕರ
ಮುನಿಮಾದ ಶೆಟ್ಟಿ ಕೊಳ್ಳೇಗಾಲ ಘಟಕ, ಕೆಎಸ್‌ಆರ್‌ಟಿಸಿ, ಚಾಮರಾಜನಗರ ವಿಭಾಗ
Related








