ಮನೆ ಬಳಿ ಬಸ್ ನಿಲ್ಲಿಸದಿದ್ದಕ್ಕೆ ಕೆಎಸ್‌ಆರ್‌ಟಿಸಿ ಚಾಲಕನ ಮೇಲೆ ಹಲ್ಲೆ: ಆರೋಪಿ ವಿರುದ್ಧ ಪೊಲೀಸ್ ಪ್ರಕರಣ ದಾಖಲು
ಕಡೂರು: ಮನೆ ರಸ್ತೆಯಲ್ಲೇ ಸಂಚರಿಸುತ್ತಿದ್ದ ಬಸ್ ಕೈ ಸನ್ನೆ ಮಾಡಿದರೂ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕೆ.ಎಸ್.ಆರ್.ಟಿ.ಸಿ.ಬಸ್ ಚಾಲಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಆಣೆಗೆರೆ ನಾರಣಾಪುರ ಗ್ರಾಮದಲ್ಲಿ ನಡೆದಿದೆ.
ಕಡೂರು ಘಟಕದ ಚಾಲಕ ಬಿ.ವೈ.ರೇಣುಕಾರಾಧ್ಯ ಹಲ್ಲೆಗೊಳಗಾದವರು. ಪಂಚನಹಳ್ಳಿಯಿಂದ ಮಧ್ಯಾಹ್ನ ಕಡೂರಿಗೆ ಹೊರಟ ಕೆ.ಎಸ್.ಆರ್.ಟಿ.ಸಿ. ಬಸ್ ಆಣೆಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿ ಕೊಂಡು ಮುಂದೆ ಸಾಗುವಾಗ ಎ.ಜಿ.ಮಂಜುನಾಥ್ ಎಂಬುವರು ತನ್ನ ಮನೆಯ ಹತ್ತಿರ ಪತ್ನಿಯನ್ನು ಬಸ್‌ಗೆ ಹತ್ತಿಸುವ ಸಲುವಾಗಿ ಬಸ್ ನಿಲ್ಲಿಸುವಂತೆ ಚಾಲಕನಿಗೆ ಕೈ ತೋರಿಸಿದ್ದಾರೆ.
ಆದರೆ, ನಿಲ್ದಾಣವಲ್ಲದ ಕಾರಣ ಚಾಲಕ ರೇಣುಕಾರಾಧ್ಯ ಬಸ್ ನಿಲ್ಲಸದೆ ಮುಂದೆ ಸಾಗಿದ್ದಾನೆ. ಕೂಡಲೆ ಮಂಜುನಾಥ್ ತನ್ನ ದ್ವಿಚಕ್ರ ವಾಹನದಲ್ಲಿ ಹೆಂಡತಿಯನ್ನು ಕೂರಿಸಿಕೊಂಡು ಬಸ್ ಹಿಂಬಾಲಿಸಿದ್ದಾನೆ. ಮುಂದಿನ ನಿಲ್ದಾಣವಾದ ನಾರಣಾಪುರ ಗ್ರಾಮದಲ್ಲಿ ನಿಂತಿದ್ದ ಬಸ್‌ಗೆ ಹೆಂಡತಿಯನ್ನು ಹತ್ತಿಸಿ ಮುಂದೆ ಬಂದು ಡ್ರೈವರ್ ಹತ್ತಿರ ಜಗಳ ತೆಗೆದಿದ್ದಾನೆ.
ಈ ವೇಳೆ ಮಾತು ಮಾತಿಗೆ ಜಗಳ ಬೆಳೆದು ಎ.ಜಿ.ಮಂಜುನಾಥ್ ಚಾಲಕ ಬಿ.ವೈ.ರೇಣುಕಾರಾಧ್ಯನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.