
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ತುಮಕೂರು ವಿಭಾಗದ ಕೆಲವು ಘಟಕಗಳಲ್ಲಿ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಡ್ಯೂಟಿರೋಟ ಪದ್ಧತಿಯನ್ನು ಜೇಷ್ಠತೆಯ ಆಧಾರದ ಮೇಲೆ ಮಾಡುತ್ತಿಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಎಸ್.ಎಲ್.ಲೋಕೇಶ್ ಲಿಖಿತ ದೂರು ನೀಡಿದ್ದಾರೆ.
ಈ ಸಂಬಂಧ ಶನಿವಾರ ದೂರು ನೀಡಿರುವ ಲೋಕೇಶ್, ತುಮಕೂರು ವಿಭಾಗದಲ್ಲಿ ಏಳು ಘಟಕಗಳ ಪೈಕಿ ಶಿರ ಹಾಗೂ ಮಧುಗಿರಿಯಲ್ಲಿ ಕೇಂದ್ರ ಕಚೇರಿ ಆದೇಶದ ಅನ್ವಯ ಜೇಷ್ಠತೆ ಆಧಾರದ ಮೇಲೆ ಡ್ಯೂಟಿರೋಟ ಪದ್ಧತಿಯನ್ನು ಜನವರಿಯಿಂದ ಜಾರಿಗೆ ತಂದಿದ್ದಾರೆ. ಆದರೆ ಉಳಿದ ಘಟಕಗಳಲ್ಲಿ ಚಾಲನಾ ಸಿಬ್ಬಂದಿಗಳಿಗೆ ಸಂಚಾರ ಶಾಖೆಯಲ್ಲಿ ಇರುವ ಸಿಬ್ಬಂದಿಗಳು ಹಲವಾರು ಕಾರಣಗಳನ್ನು ಹೇಳಿಕೊಂಡು ಡ್ಯೂಟಿರೋಟ ಪದ್ಧತಿಯ ಕೌನ್ಸಿಲಿಂಗ್ ಮಾಡುವುದನ್ನು ಮುಂದೂಡುತ್ತಾ ಬಂದಿದ್ದಾರೆ.
ಕೆಲವು ಘಟಕಗಳಲ್ಲಿ ಬಿಎಂಟಿಸಿ ಇಂದ ಕೆಲವು ಸಿಬ್ಬಂದಿಗಳು ವರ್ಗಾವಣೆಯಾಗಿ ಬರುವುದಿದೆ ಅವರು ಬಂದ ನಂತರ ಮಾಡುತ್ತೇವೆ ಎಂದು ಇನ್ನೂ ಕೆಲವು ಘಟಕಗಳಲ್ಲಿ ನಮ್ಮನ್ನು ನೀವು ಕೇಳಬೇಡಿ ವಿಭಾಗಿಯ ಸಂಚಲನಾಧಿಕಾರಿಗಳನ್ನು ಕೇಳಿ ಎಂದು ಮತ್ತೆ ಕೆಲವು ಘಟಕಗಳಲ್ಲಿ, ಈ ವಾರ ಮುಂದಿನ ವಾರ ಎಂದು ಸಬೂಬು ಹೇಳುತ್ತಾ ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಮುಖ್ಯವಾಗಿ ಸಂಚಾರ ಶಾಖೆಯ ಅಧಿಕಾರಿಗಳಿಗೆ ಕೆಲವು ಚಾಲನೆ ಸಿಬ್ಬಂದಿಗಳು ಹೊಂದಾಣಿಕೆಯ ಕಾರಣದಿಂದ ಹಣ ನೀಡಿ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ಅವರ ಅನುಕೂಲಕ್ಕಾಗಿ ಡ್ಯೂಟಿರೋಟ ಪದ್ದತಿ ಮಾಡುವುದನ್ನು ಮುಂದೂಡುತ್ತ ಬಂದಿದ್ದಾರೆ.
ತಿಪಟೂರು ಘಟಕದಲ್ಲಿ 2024ರಲ್ಲಿ ಆದಂತ ಡ್ಯೂಟಿರೋಟ ಪದ್ಧತಿಯ ಆಯ್ಕೆ ಮಾಡಿಕೊಂಡ ಶೇಕಡ 50ಕ್ಕೂ ಹೆಚ್ಚು ಸಿಬ್ಬಂದಿಗಳು ಆ ಮಾರ್ಗಗಳಲ್ಲಿ ಡ್ಯೂಟಿ ಮಾಡದೆ ಸಂಚಾರ ಶಾಖೆಯವರ ನಡುವೆ ಹಣದ ಹೊಂದಾಣಿಕೆಯ ಕಾರಣದಿಂದ ಹೆಚ್ಚು ರೂಟ್‌ಗಳನ್ನು ಹಾಗೂ ರಿಟರ್ನ್ ರೂಟ್‌ಗಳನ್ನು ಅತಿ ಹೆಚ್ಚು ಹಣ ನೀಡಿ ಮಾಡುವಂತ ವ್ಯವಸ್ಥೆ ಮಾಡಿಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಸೇವಾ ಹಿರಿತನದ ನೌಕರರಿಗೆ ಮಾರ್ಗಗಳು ದೊರೆಯುತ್ತಿಲ್ಲ. ಮುಖ್ಯವಾಗಿ ಎಲ್ಲ ಘಟಕಗಳಲ್ಲಿಯೂ ಹಿರಿಯ ಸಿಬ್ಬಂದಿಗಳಿಗೆ ಹೆಚ್ಚಿನ ತೊಂದರೆ ಇದ್ದು ಇತ್ತೀಚಿಗೆ ಬಂದಂತಹ ಕಿರಿಯ ಸಿಬ್ಬಂದಿಗಳು ಸಂಚಾರ ಶಾಖೆಯವರಿಗೆ ಹಣ ನೀಡಿ ಹಿರಿಯ ಸಿಬ್ಬಂದಿಗಳನ್ನು ಕಡೆಗಣನೆ ಮಾಡಿದ್ದಾರೆ.
ಈ ಎಲ್ಲ ಸಮಸ್ಯೆಗಳ ಬಗ್ಗೆ ಘಟಕಗಳಿಗೆ ಪ್ರತಿ ತಿಂಗಳು ಆಗಮಿಸುವ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಹಾಗೂ ವಿಭಾಗೀಯ ಸಂಚಲನಾಧಿಕಾರಿಗಳಿಗೆ ಎಲ್ಲ ಘಟಕಗಳಲ್ಲಿಯೂ ಸಿಬ್ಬಂದಿಗಳು ಮನವಿ ಸಲ್ಲಿಸಿದ್ದಾರೆ. ಆದರೂ ಕೂಡ ಅಧಿಕಾರಿಗಳು ಸಂಚಾರ ಶಾಖೆಯವರಿಂದ ಪ್ರತಿ ತಿಂಗಳು ಮಾಮೂಲಿ ಪಡೆಯುವ ಕಾರಣಕ್ಕಾಗಿಯೇ ಡ್ಯೂಟಿರೋಟ ಪದ್ಧತಿ ಅನುಷ್ಠಾನಗೊಳಿಸುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸೇವಾ ಹಿರಿತನದ ಚಾಲನೆ ಸಿಬ್ಬಂದಿಗಳಿಗೆ ಘಟಕಗಳಲ್ಲಿ ಕೆಲಸ ನಿರ್ವಹಿಸುವಂತಹ ವಾತಾವರಣ ಇಲ್ಲವಾಗಿದೆ. ಪ್ರತಿ ಸಿಬ್ಬಂದಿಯೂ ಸಹ ಘಟಕದಲ್ಲಿ ಉಸಿರುಗಟ್ಟಿಸುವಂತಹ ವಾತಾವರಣದಲ್ಲಿಯೇ ಕೆಲಸ ನಿರ್ವಹಿಸಲು ಹೋಗುವ ಕಾರಣದಿಂದ ಅವರ ಆರೋಗ್ಯದಲ್ಲಿ ಸಮಸ್ಯೆಗಳು ಕಂಡು ಬರುತ್ತಿವೆ.
ಈ ಅಂಶಗಳನ್ನು ಹಾಗೂ ಕಾರಣಗಳನ್ನು ಪರಿಶೀಲಿಸಿ, ತುಮಕೂರು ವಿಭಾಗದ ಅಧಿಕಾರಿಗಳಿಗೆ ಚಾಲನಾ ಸಿಬ್ಬಂದಿಗಳಿಗೆ ಅನುಕೂಲಕರ ವಾಗುವ ರೀತಿಯಲ್ಲಿ ಡ್ಯೂಟಿರೋಟ ಪದ್ಧತಿಯನ್ನು ಈ ಕೂಡಲೇ ತತಕ್ಷಣಕ್ಕೆ ಜಾರಿಗೆ ಬರುವಂತೆ ಮಾಡಲು ವಿಭಾಗಿಯ ನಿಯಂತ್ರಣ ಅಧಿಕಾರಿಗಳಿಗೆ ತಾವು ನಿರ್ದೇಶನ ನೀಡಬೇಕೆಂದು ಹಾಗೂ ಈ ಪದ್ದತಿಯನ್ನು ಅನುಷ್ಠಾನಗೊಳಿಸಲು ತಡ ಮಾಡುತ್ತಿರುವಂತಹ ಪ್ರತಿ ಘಟಕದ ಘಟಕ ವ್ಯವಸ್ಥಾಪಕರು ಹಾಗೂ ಸಂಚಾರ ಶಾಖೆಯ ಇನ್ಸ್ಪೆಕ್ಟರ್ ಗಳಿಗೆ ಸೂಕ್ತ ರೀತಿಯ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.