KSRTC: ನ.26ರಂದು ನಡೆಯುವ ಸಿಎಂ ಅಧ್ಯಕ್ಷತೆ ಸಭೆಯ ಬಗ್ಗೆ ಬಹುದೊಡ್ಡ ನಿರೀಕ್ಷೆಯಲ್ಲಿ ನಾಲ್ಕೂ ನಿಗಮಗಳ ನೌಕರರು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಿಎಂ ಅಧ್ಯಕ್ಷತೆಯಲ್ಲಿ ನೌಕರರ ಸಂಘಟನೆಗಳ ಸಭೆಯನ್ನು ವಿಧಾನಸೌಧದಲ್ಲಿ ಕರೆಯಲಾಗಿದ್ದು, ನವೆಂಬರ್ 26ರಂದು ನಡೆಯವ ಸಭೆಯಲ್ಲಿ ನೌಕರರಿಗೆ ಒಳ್ಳೆದಾಗುವಂತಹ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನೌಕರರ ಮನವಿ ಮಾಡಿದ್ದಾರೆ.

ಬುಧವಾರ (ನ.19) ಸಭೆ ನಡೆಯುವ ಸಂಬಂಧ KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಮಾಹಿತಿ ನೀಡಿ ಸಭೆ ನಡೆಯುವ ಸ್ಥಳದ ಬಗ್ಗೆ ತಿಳಿಸಿರಲಿಲ್ಲ ಹೀಗಾಗಿ ಗುರುವಾರ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾರೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಮೂರನೇ ಮಹಡಿಯ 313ನೇ ಕೊಠಡಿಯಲ್ಲಿ ಸರ್ಕಾರದ ನಿರ್ದೇಶನದಂತೆ ನಿಗದಿಪಡಿಸಿರುವ ಸಭೆಗೆ ಎಲ್ಲ ಸಂಘಟನೆಗಳ ತಲಾ ಇಬ್ಬರು ಪದಾಧಿಕಾರಿಗಳು ಹಾಜರಾಗಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಭೆ ಅಂದು ಸಂಜೆ 4 ಗಂಟೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೊಂದಿಗೂ ಹಾಗೂ ಮಧ್ಯಾಹ್ನ 4.30ಕ್ಕೆ ನೌಕರರ ಒಕ್ಕೂಟದೊಂದಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಹೀಗಾಗಿ ನ.26ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳು ಕೂಡ ನಮ್ಮ ಬಗ್ಗೆ ಕಾಳಜಿವಹಿಸಬೇಕು. ಅದರಂತೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಹಾಗೂ ನೌಕರರ ಒಕ್ಕೂಟದ ಪದಾಧಿಕಾರಿಗಳು ಕೂಡ ಅಳೆದುತೂಗಿ ನೌಕರರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳವಾಗಿದ್ದು ಅದರ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಬೇಕು. ಜತೆಗೆ ಇದರ ಹಿಂಬಾಕಿಯನ್ನು ಕೊಡಬೇಕು. ಆ ನಿಟ್ಟಿನಲ್ಲಿ ಸರ್ಕಾರವು ತೀರ್ಮಾನ ತೆಗೆದುಕೊಳ್ಳಬೇಕು ಮತ್ತು ಸಂಘಟನೆಗಳ ಪದಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ನ.26ರಂದು ನಡೆಯುವ ಸಭೆಯ ಬಗ್ಗೆ ನಾಲ್ಕೂ ನಿಗಮಗಳ ಸಮಸ್ತ ನೌಕರರು ಬಹುದೊಡ್ಡ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಸಂಘಟನೆಗಳು ದುಡಿಕಿನ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.
Related









