KSRTC ನೌಕರರ ವೇತನ..: ಕಾದು ನೋಡಿದರು ಬಗ್ಗದ ಸರ್ಕಾರ- ಜ.29ರಂದು ಬೆಂಗಳೂರು ಚಲೋಗೆ ಜಂಟಿ ಕ್ರಿಯಾ ಸಮಿತಿ ನಿರ್ಧಾರ

- ನೌಕರರ ವೇತನ ಸಂಬಂಧ ಸಭೆ ಕರೆಯದೆ ಕಾಲಹರಣ ಮಾಡುತ್ತಿರುವ ಸರ್ಕಾರ
- ಶತಾಯಗತಾಯ ಈ ಬಾರಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲೇಬೇಕು
- ಇಲ್ಲದಿದ್ದರೆ ಹೋರಾಟದ ಮೂಲಕವೇ ಪಡೆಯಬೇಕು ಎಂಬ ದೃಢ ನಿರ್ಧಾರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೇರಿದಂತೆ ನಾಲ್ಕೂ ನಿಗಮಗಳ ನೌಕರರ ಬೇಡಿಕೆ ಈಡೇರಿಸದೇ ಇರುವುದನ್ನು ಖಂಡಿಸಿ ಇದೇ ಜ.29ರಂದು ಬೆಂಗಳೂರು ಚಲೋ ನಡೆಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.

2020 ಜನವರಿ 1ರಿಂದ ಅನ್ವಯವಾಗುವಂತೆ ಬಾಕಿ ಇರುವ 38 ತಿಂಗಳ ಹಿಂಬಾಕಿ ನೀಡಿಲ್ಲ. 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ನಡೆಸಬೇಕಿತ್ತು. ಹಲವು ಬಾರಿ ಸರ್ಕಾರದೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗದೇ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಎಚ್.ವಿ. ಅನಂತಸುಬ್ಬರಾವ್, ಬಿ.ಜಯದೇವ ಅರಸು, ಎಚ್.ಡಿ. ರೇವಪ್ಪ, ವಿ.ಸೋಮಣ್ಣ, ಜಗದೀಶ ಎಚ್.ಆರ್., ರಾಜೇಂದ್ರಗೌಡ ಜಿ.ಕೆ. ತಿಳಿಸಿದ್ದಾರೆ.
ಜ.16ರಂದು ಸಾರಿಗೆ ಸಚಿವರೊಂದಿಗೆ ಸಭೆ ಕರೆಯಲಿಲ್ಲ: ಇನ್ನು ಇದೇ ಜ.14ರ ಬುಧವಾರ ನಾಲ್ಕೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಸಭೆ ಸಾರಿಗೆ ಸಚಿವರೊಂದಿಗೆ ನಡೆದಿದೆ. ಈ ಸಭೆ ಬಳಿಕ ನಿಮ್ಮನ್ನು ಮುಂದಿನ ಶುಕ್ರವಾರ ಅಂದರೆ ಕಳೆದ ಇದೇ ಜ.16ರಂದು ಸಾರಿಗೆ ಸಚಿವರೊಂದಿಗೆ ಸಭೆ ಕರೆಯಲಾಗುವುದು ಎಂದು ಕೆಎಸ್ಆರ್ಟಿಸಿ ಎಂಡಿ ಅಕ್ರಮ್ ಪಾಷ ಜಂಟಿ ಕ್ರಿಯಾ ಸಮಿತಿಯವರಿಗೆ ತಿಳಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಜ.14ರಂದು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಕೂಡ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದ್ದಾರೆ. ಆದರೆ, ಇದೇ ವೇಳೆಗೆ ಕೆಎಸ್ಆರ್ಟಿಸಿ ಎಂಡಿ ಅವರು ಶುಕ್ರವಾರ ನಿಮ್ಮನ್ನು ಕರೆಯಲಾಗುವುದು ಎಂದು ತಿಳಿಸಿದ್ದರು. ಆದರೆ, ಜ.14ರಂದು ಸಾರಿಗೆ ಸಚಿವರೊಂದಿಗೆ ಎಂಡಿಗಳ ಸಭೆ ನಡೆದ ಬಳಿಕ ನಮ್ಮ ಸಭೆ ಕರೆದಿಲ್ಲದಿರುವುದು ಏಕೆ ಎಂದು ಎಂಡಿ ಅವರಲ್ಲಿ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಕೇಳಿದ್ದಾರೆ. ಇದಕ್ಕೆ ಸಮಂಜಸವಾದ ಉತ್ತರ ಎಂಡಿ ಅವರಿಂದ ಬಾರದಿರುವುದಕ್ಕೆ ಆಕ್ರೋಶಗೊಂಡಿದ್ದು, ಇದೇ 29ರಂದು ಬೆಂಗಳೂರು ಚಲೋ ನಡೆಸಲು ನಿರ್ಧಿಸಿಸದ್ದಾರೆ.
ಸಂಕ್ರಾಂತಿ ಮುಗಿದರು ಇಲ್ಲ ಯಾವುದೇ ನಿರ್ಧಾರ: ಇನ್ನು ಈಗಾಗಲೇ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೌಕರರ ಬೇಡಿಕೆ ಈಡೇರಿಸದೇ ಇರುವುದನ್ನು ಖಂಡಿಸಿ ಕರಪತ್ರಗಳನ್ನು ಹಂಚಿ ಹೋರಾಟಕ್ಕೆ ಕರೆ ನೀಡಿದ್ದು, ದಿಢೀರ್ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿತ್ತು. ಆದರೆ, ಸರ್ಕಾರ ಇಲ್ಲ ನಾವು ಸಂಕ್ರಾಂತಿ ವೇಳೆ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಮಯ ಕೇಳಿತ್ತು.
ಆದರೆ ಜ.15ರೊಳಗೆ ಮತ್ತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಜನವರಿ 25ರೊಳಗೆ ಏನಾದರೂ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳಿಗೆ ಸರ್ಕಾರದಿಂದ ಈವರೆಗೂ ಯಾವುದೇ ಉತ್ತರ ಬಾರದಿರುವುದರಿಂದ ಸಿಟ್ಟಿಗೆದ್ದಿದ್ದು, ಶತಾಯಗತಾಯ ಈ ಬಾರಿ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಲೇಬೇಕು ಇಲ್ಲದಿದ್ದರೆ ಹೋರಾಟದ ಮೂಲಕವೇ ಪಡೆಯಬೇಕು ಎಂಬ ದೃಢ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ.
ನೌಕರರು ನಮಗೆ ಛೀಮಾರಿ ಹಾಕುತ್ತಾರೆ: ಇನ್ನು ಜಂಟಿ ಕ್ರಿಯಾ ಸಮಿತಿಯಲ್ಲಿರುವ ಎರಡು ಸಂಘಟನೆಗಳ ಮುಖಂಡರು ನಾವು ಈ ರೀತಿ ಕಾಲಹರಣ ಮಾಡುತ್ತಾ ಹೋದರೆ ನೌಕರರು ನಮಗೆ ಛೀಮಾರಿ ಹಾಕುತ್ತಾರೆ. ಹೀಗಾಗಿ ನಾವು ಕಾಲಹರಣ ಮಾಡುವ ಬದಲು ಸರ್ಕಾರಕ್ಕೆ ಬಿಸಿ ಮುಟ್ಟಿಸಲೇ ಬೇಕು ಎಂದು ಜ.14ರ ಬುಧವಾರ ನಡೆದ ಸಮಿತಿ ಸಭೆಯಲ್ಲಿ ಪಟ್ಟುಹಿಡಿದಿದ್ದರಿಂದ ಜ.16ರ ಶುಕ್ರವಾರದ ವರೆಗೂ ಕಾದು ನೋಡಿ ಅಂತಿಮ ನಿರ್ಧಾರಕ್ಕೆ ಬರೋಣ ಎಂದು ಚರ್ಚೆಯಾಗಿತ್ತು.
ಆದರೆ, ಜ.16 ಮುಗಿದು ಈವರೆಗೂ ಕಾದು ನೋಡಿದರೂ ಸಭೆ ಕರೆಯುವ ಯಾವುದೆ ಮುನ್ಸೂಚನೆ ಸರ್ಕಾರದಿಂದ ಅಥವಾ ಸಾರಿಗೆ ಅಧಿಕಾರಿಗಳಿಂದ ಬಾರದಿರುವುದಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಈಗಲೂ ಕಾಲ ಮಿಂಚಿಲ್ಲ ಜ.29ರೊಳಗೆ ಬೇಡಿಕೆ ಈಡೇರಿಸುವ ಸಂಬಂಧ ನಮ್ಮ ಸಭೆ ಕರೆದು ಮಾತುಕತೆ ನಡೆಸಿ ಘೋಷಣೇ ಮಾಡಬೇಕು. ಇಲ್ಲಿದ್ದರೆ ಮುಂದಾಗುವ ಪರಿಣಾಮವನ್ನು ನೀವೆ ಎದುರಿಸಿ ಎಂದು ಎಚ್ಚರಿಕೆ ಕೊಟ್ಟಿದೆ ಜಂಟಿ ಕ್ರಿಯಾ ಸಮಿತಿ.
Related









