ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಗಸ್ಟ್ 5 ರಿಂದ (ಇಂದಿನಿಂದ) ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಇಳಿದಿದ್ದಾರೆ.
1800 ಕೋಟಿ ರೂ. ಹಿಂಬಾಕಿ, ಕೋಟ್ಯಾಂತರ ರೂಪಾಯಿ ಪಿಎಫ್ ಬಾಕಿ, ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಆದರೆ ಹಿಂಬಾಕಿ ಕೊಡಲು ಸರ್ಕಾರ ಒಪ್ಪದಿದ್ದ ಕಾರಣ, ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ. ಇದು ಈಗ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತಿದೆ.
ಇಲ್ಲಿಯವರೆಗೂ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಲಕ್ಷಾಂತರ ಮಹಿಳೆಯರು ಖಾಸಗಿ ಬಸ್‌ಗಳಿಗೆ ಹಣಕೊಟ್ಟು ಪ್ರಯಾಣಿಸುತ್ತಿದ್ದು, ಸರ್ಕಾರಕ್ಕೆ ಹಿಡಿ ಶಾಪಹಾಕುತ್ತಿದ್ದಾರೆ. ಇನ್ನೊಂದೆಡೆ ಇರುವವರು ದುಡ್ಡುಕೊಟ್ಟು ಹೋಗುತ್ತಾರೆ ಬಡವರು ಹೇಗೆ ಪ್ರಯಾಣ ಮಾಡಬೇಕು ಎಂದು ಕಿಡಿಕಾರುತ್ತಿದ್ದಾರೆ.
ಇನ್ನು ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಸರ್ಕಾರ ಮತ್ತು ಸಾರಿಗೆ ನೌಕರರ ತಿಕ್ಕಾಟದಲ್ಲಿ ನಾವು ಸಮಸ್ಯೆ ಅನುಭವಿಸುವಂತಾಗಿದೆ. ಹೀಗಾಗಿ ಕೂಡಲೇ ನೌಕರರ ಬೇಡಿಕೆ ಈಡೇರಿಸುವ ಮೂಲಕ ನಮಗೆ ಅನುಕೂಲ ಮಾಡಿಕೊಡಬೇಕು ಎಂದು ಚಾಮುಂಡಿ ಬೆಟ್ಟಕ್ಕೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರು ಆಗ್ರಹಿಸಿದ್ದಾರೆ.
ನೌಕರರು ಸರ್ಕಾರದ ಜತೆ ನಿನ್ನೆ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಇದರ ನಡುವೆ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಇಂದಿನಿಂದ (ಆ.5) ಬೆಳಗ್ಗೆಯಿಂದಲೇ ಮುಷ್ಕರಕ್ಕಿಳಿದಿದ್ದಾರೆ. ಇದರಿಂದ ರಾಜ್ಯಾದ್ಯಂತ ಬಸ್‌ಗಳ ಸೇವೆಯಲ್ಲಿ ವ್ಯತ್ಯುಯವಾಗಿ ಕೋಟಿಗೂ ಹೆಚ್ಚು ಪ್ರಯಾಣಿಕರು ಪರದಾಡುವಂತಾಗಿದೆ.
ಇಂದು ಬೆಳಗ್ಗೆ 5 ಗಂಟೆಯಿಂದಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು, ನಾಲ್ಕು ನಿಗಮಗಳ ಬಸ್‌ಗಳ ಸಂಚಾರ ಸ್ತಬ್ಧಗೊಂಡಿವೆ. ಬೆಂಗಳೂರು, ಮೈಸೂರು, ಕಲಬುರಗಿ, ದಾವಣಗೆರೆ, ಹಾಸನ, ಬೆಳಗಾವಿ, ಚಿಕ್ಕಬಳ್ಳಾಪುರ, ಹಾವೇರಿ ಸೇರಿದಂತೆ ರಾಜ್ಯಾದ್ಯಂತ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಬಹುತೇಕ ನೌಕರರು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಗೆ ಧುಮುಕಿದ್ದಾರೆ.

ಆದರೆ, ಕೆಲವೆಡೆ ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಿಲ್ಲ, ಏಕೆಂದರೆ ತುರ್ತು ಕಾರ್ಯಗಳಿಗೆ ಪ್ರಯಾಣಿಕರು ಖಾಸಗಿ ಬಸ್, ಟ್ರಾವೆಲ್ಸ್, ಆಟೋ, ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದಾರೆ. ಈ ನಡುವೆ ಹೈಕೋರ್ಟ್ ಆದೇಶದ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲು ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ.
Related
