KSRTC: ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಕೂಡ 38 ತಿಂಗಳ ಹಿಂಬಾಕಿ ಸರ್ಕಾರ ಕೊಟ್ಟರೆ ನೌಕರರು ಖುಷಿಯಾಗುತ್ತಾರೆ ಎಂದೇ ಶಿಫಾರಸು ಮಾಡಿದೆ

ಬೆಂಗಳೂರು: ಸಾರಿಗೆ ನೌಕರರಿಗೆ 2020 ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡುವುದಕ್ಕೆ ತಾವು ಈಗಾಗಲೇ 14 ತಿಂಗಳ ಹಿಂಬಾಕಿಯಷ್ಟೇ ಕೊಡುತ್ತೇವೆ ಎಂದು ಹೇಳಿದ್ದೀರಿ. ಇದರ ಜತೆಗೆ ಉಳಿದ 24 ತಿಂಗಳ ಹಿಂಬಾಕಿಯನ್ನು ಸೇರಿ ಒಟ್ಟು 38 ತಿಂಗಳ ಹಿಂಬಾಕಿಯನ್ನು ಒಂದು ಬಾರಿ ಆಧಾರದ ಮೇಲೆ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾಸಮಿತಿ ಇಂದು ಮನವಿ ಸಲ್ಲಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಂಡಿ ಮೂಲಕ ಇಂದು ಸಿಎಂಗೆ ಮನವಿ ಸಲ್ಲಿಸ ಜಂಟಿ ಕ್ರಿಯಾ ಸಮಿತಿಯೂ ಸಾರಿಗೆ ನಿಗಮಗಳ ನೌಕರರು 05.08.2025ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿದ್ಧರಾಗಿದ್ದರು. ತಾವು (ಸಿಎಂ) 04.08.2025ರಂದು ಕರೆದಿದ್ದ ಸಭೆಯಲ್ಲಿ ವಿಧಾನಸಭಾ ಅಧಿವೇಶನದ ನಂತರ ಮತ್ತೆ ನಮ್ಮ ಬೇಡಿಕೆಗಳ ಬಗ್ಗೆ ಚರ್ಚೆಯನ್ನು ಮುಂದುವರಿಸಬಹುದೆಂಬ ಸೂಚನೆ ನೀಡಿದ್ದೀರಿ ಹಾಗೂ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಂಖ್ಯೆ 23602/2025ರಲ್ಲಿ ರಾಜ್ಯದ ಉಚ್ಚ ನ್ಯಾಯಾಲಯವು ಆದೇಶ ನೀಡಿ ಜಂಟಿ ಕ್ರಿಯಾ ಸಮಿತಿಗೆ ಉದ್ದೇಶಿತ ಮುಷ್ಕರವನ್ನು ಮುಂದೂಡುವಂತೆ ನಿರ್ದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ನಾವು 05.08.2025ರ ಮಧ್ಯಾಹ್ನದಿಂದಲೇ ಮುಷ್ಕರವನ್ನು ಹಿಂಪಡೆದು ಕೂಡಲೇ ಬಸ್ ಕಾರ್ಯಾಚರಣೆ ನಡೆಸುವಂತೆ ನೌಕರರಿಗೆ ಮನವಿ ಮಾಡಿದ್ದೆವು ಹಾಗೂ ಸರ್ಕಾರ ಮತ್ತು ಕಾರ್ಮಿಕ ಸಂಘಟನೆಗಳು ಬೇಡಿಕೆಗಳ ಇತ್ಯರ್ಥಕ್ಕೆ ಮಾತುಕತೆ ನಡೆಸುತ್ತಿರುವುದಾಗಿ ರಾಜ್ಯ ಹೈಕೋರ್ಟ್ ತಿಳಿಸಿದ್ದೆವು. ಈ ಹಿನ್ನೆಲೆಯಲ್ಲಿ
ಹೈ ಕೋರ್ಟ್ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿತು.
04.08.2025ರ ಸಭೆಯಲ್ಲಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿಯ ಶಿಫಾರಸಿನ ಬಗ್ಗೆ ಮುಖ್ಯಮಂತ್ರಿಗಳಾದ ತಮ್ಮ ಗಮನ ಸೆಳೆದಾಗ, ತಾವು 14 ತಿಂಗಳ ವೇತನ ಒಪ್ಪಂದದ ಬಾಕಿ ಹಣವನ್ನು ಸರ್ಕಾರದ ವತಿಯಿಂದ ಕೊಡಲು ಒಪ್ಪಿದ್ದೀರಿ. ಇನ್ನು 2020 ಮತ್ತು 2021ರ ಬಾಕಿ ಹಣದ ಬಗ್ಗೆ ಏಕ ಸದಸ್ಯ ಸಮಿತಿ ಈ ವರದಿಯಲ್ಲಿ ಕೆಳಕಂಡಂತೆ ತಿಳಿಸಿದೆ.
“However, the Government may at its discretion, consider extending further assistance to RTCs to pay the arrears of at least a part of this period, subject to its own resource position. Any such additional assistance by the Government will go a long way in keeping up the morale of the employees and ensuring their wholehearted involvement in providing better services to the people of the State. The Committee hopes that employees will also appreciate any further assistance that the government may be able to extend in the matter.” (Page 10 of the Report dated 04.09.2023).
ಕನ್ನಡಕ್ಕೆ ಭಾಷಾಂತರ ಮಾಡಿರುವುದು: “ಆದಾಗ್ಯೂ, ಸರ್ಕಾರವು ತನ್ನ ಸ್ವಂತ ಸಂಪನ್ಮೂಲಕ್ಕೆ ಒಳಪಟ್ಟು, ಈ (2020 ಜ.1ರಿಂದ 2023 ಫೆ.28ರ ನಡುವಿನ ಅವಧಿ) ಅವಧಿಯ ಕನಿಷ್ಠ ಒಂದು ಭಾಗದ ಬಾಕಿ ಹಣವನ್ನು ಪಾವತಿಸುವ ಮೂಲಕ ಆರ್‌ಟಿಸಿಗಳಿಗೆ ಹೆಚ್ಚಿನ ಸಹಾಯವನ್ನು ನೀಡುವ ಬಗ್ಗೆ ಸರ್ಕಾರ ತನ್ನ ವಿವೇಚನೆಯಿಂದ ಪರಿಗಣಿಸಬಹುದು. ಸಾರಿಗೆಯ ನಾಲ್ಕೂ ನಿಗಮಗಳಿಗೂ ಸರ್ಕಾರದಿಂದ ಅಂತಹ ಯಾವುದೇ ಹೆಚ್ಚುವರಿ ಸಹಾಯ ನೀಡಿದರು ಕೂಡ ನೌಕರರ ನೈತಿಕತೆ ಹೆಚ್ಚಿಸುವ ಮತ್ತು ರಾಜ್ಯದ ಜನರಿಗೆ ಉತ್ತಮ ಸೇವೆಗಳನ್ನು ನೀಡುವುದಕ್ಕೆ ನೌಕರರು ಪೂರ್ಣವಾಗಿ ಅವರನ್ನು ಅವರು ತೊಡಗಿಸಿಕೊಳ್ಳುವುದಕ್ಕೆ ಬಹಳ ಸಹಾಯವಾಗುತ್ತದೆ. ಜತೆಗೆ ಈ ವಿಷಯದಲ್ಲಿ ಸರ್ಕಾರವು ವಿಸ್ತರಿಸಲು ಸಾಧ್ಯವಾಗುವ ಯಾವುದೇ ಹೆಚ್ಚಿನ ಸಹಾಯವನ್ನು ನೌಕರರಿಗೆ ಮಾಡಿದರೆ ಆ ನೌಕರರು ಗೌರವದಿಂದ ಪ್ರಶಂಸನಾತ್ಮಕವಾಗಿ ಸ್ವೀಕರಿಸುತ್ತಾರೆ ಎಂದು ಸಮಿತಿಯು ಆಶಿಸುತ್ತದೆ ಎಂದು ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿಯು ಸೆ.4.2023ರಂದು ನೀಡಿರುವ ವರದಿಯ ಪುಟ 10ರಲ್ಲಿ ಶಿಫಾರಸು ಮಾಡಿರುವ ಬಗ್ಗೆ ತಿಳಿಸಿದೆ.

ಈ ವರದಿಯೂ ಕೂಡ 01.01.2020ರಿಂದ ನಿಗಮಗಳ ನೌಕರರಿಗೆ ಬರಬೇಕಾಗಿರುವ ಬಾಕಿ ಹಣದ ಬಗ್ಗೆ ನಕಾರಾತ್ಮಕವಾಗಿ ಶಿಫಾರಸು ಮಾಡಿಲ್ಲ. ವಾಸ್ತವ ಸಂಗತಿ ಏನೆಂದರೆ ನಾಲ್ಕು ವರ್ಷಗಳಿಗೊಮ್ಮೆ ವೇತನ ಹೆಚ್ಚಳ ಆಗುತ್ತಿದೆ. ಒಪ್ಪಂದ ಅಥವಾ ಆದೇಶ ವಿಳಂಬವಾದರೆ ಹಿಂಬಾಕಿ ಹಣವನ್ನು ನಿರಂತರವಾಗಿ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು 14 ತಿಂಗಳು ಕೊಡುವುದಾಗಿ ಹೇಳಿದ್ದೀರಿ. ಅದರ ಜತೆಗೆ ಉಳಿದ 24 ತಿಂಗಳ ಹಣವನ್ನು ಈ ಒಂದು ಬಾರಿ ಆಧಾರದ ಮೇಲೆ ಕೊಡಬೇಕೆಂದು ನಾವು ತಮ್ಮಲ್ಲಿ ಮನವಿಮಾಡುತ್ತೇವೆ ಎಂದು ಜಂಟಿ ಕ್ರಿಯಾ ಸಮಿತಿ ಸಿಎಂಗೆ ಮನವಿ ಮಾಡಿದೆ.
ಇನ್ನು ಮುಂದುವರಿದು 01.01.2024 ರಿಂದ ವೇತನ ಹೆಚ್ಚಳದ ಬಗ್ಗೆ ಜಂಟಿ ಕ್ರಿಯಾ ಸಮಿತಿಯ ವತಿಯಿಂದ 2024ರ ಜನವರಿ ತಿಂಗಳಿನಲ್ಲಿಯೇ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದೇವೆ. ಅದರ ಬಗ್ಗೆ ಹಲವಾರು ಬಾರಿ ಚರ್ಚೆ ನಡೆದಿದೆ. 09.10.2024 ರಂದು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡಾ ಪ್ರಯಾಣದರ ಹೆಚ್ಚಳವಾದ ನಂತರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಲಾಗಿತ್ತು.
ಆದ್ದರಿಂದ ತಾವು ಈ ವಿಷಯದಲ್ಲಿ ಸಾರಿಗೆ ನಿಗಮಗಳಿಗೆ ಸೂಕ್ತ ನಿರ್ದೇಶನ ಕೊಟ್ಟು ನಮ್ಮ ವೇತನ ಹೆಚ್ಚಳ ಮತ್ತಿತರ ಬೇಡಿಕೆಗಳ ಬಗ್ಗೆ ಚರ್ಚೆ ಆರಂಭಿಸಿ ಉಭಯತ್ರಯರಿಗೂ ಒಪ್ಪಿಗೆ ಆಗುವಂತಹ ಒಪ್ಪಂದಕ್ಕೆ ಬರುವಂತೆ ಸೂಕ್ತ ಆದೇಶ ನೀಡಬೇಕೆಂದು ತಮ್ಮಲ್ಲಿ ಅತ್ಯಂತ ಕಳಕಳಿಯಿಂದ ವಿನಂತಿಸುತ್ತೇವೆ. ಈಗಾಗಲೆ ಸಾಕಷ್ಟು ವಿಳಂಬವಾಗಿರುವುದರಿಂದ ಸಾರಿಗೆ ನಿಗಮಗಳ ಶ್ರಮಜೀವಿಗಳು ತಮ್ಮ ಸರ್ಕಾರದಿಂದ ಶೀಘ್ರದಲ್ಲಿಯೇ ನ್ಯಾಯ ಬಯಸುತ್ತಾರೆ ಎಂದು ಸಿಎಂಗೆ ಮನವಿ ಸಲ್ಲಿಸಿದ್ದಾರೆ.
Related








