NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 38 ತಿಂಗಳ ಹಿಂಬಾಕಿ, ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅ.15ರಿಂದ ಉಪವಾಸ ಸತ್ಯಾಗ್ರಹ -ನೌಕರರು ಗೈರಾದರೆ ವೇತನ ಕಡಿತದ ಜತೆಗೆ ಶಿಸ್ತು ಕ್ರಮ- ಎಂಡಿ ಆದೇಶ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

2020 ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳವಾಗಿದ್ದು, ಇದರ 38ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೆಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಅ.15ರಿಂದ 19ರವರೆಗೆ ಉಪವಾಪಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇದೇ ಅ.15ರಿಂದ 19ರವರೆಗೆ ಉಪವಾಸ ಸತ್ಯಾಗ್ರಹ ಹೂಡಲು ತೀರ್ಮಾನಿಸಿದ್ದು, ಈ ವೇಳೆ ನೌಕರರು ಡ್ಯೂಟಿಗೆ ಗೈರಾದರೆ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ಸಾಮಾನ್ಯ ತತ್ವದನ್ವಯ ದಿನದ ವೇತನವನ್ನು ಕಡಿತಗೊಳಿಸಲಾಗುವುದು ಎಂದು KSRTC ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ಪಾಷ ತಿಳಿಸಿದ್ದಾರೆ.

ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಅವರು, ರಾಜ್ಯದ ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠ 29.01.2004ರಂದು Writ Appeal No.6347 of 2000( LK) C/W Writ Appeal No.1005 and 1006 of 2001ರಲ್ಲಿ ನೀಡಿದ ತೀರ್ಪಿನಲ್ಲಿ ಇಂತಹ ಸಂದರ್ಭಗಳಲ್ಲಿ ನೌಕರರು ತಮ್ಮ ದೈನಂದಿನ ಕರ್ತವ್ಯಕ್ಕೆ ಗೈರು ಹಾಜರಾದ ಪಕ್ಷದಲ್ಲಿ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ಸಾಮಾನ್ಯ ತತ್ವದನ್ವಯ ದಿನದ ವೇತನವನ್ನು ಕಡಿತಗೊಳಿಸುವುದರ ಜತೆಗೆ ಆಡಳಿತವರ್ಗವು ಅನಧಿಕೃತವಾಗಿ ಗೈರಾದ ನೌಕರರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬಹುದಾಗಿದೆ ಎಂಬುದಾಗಿ ಆದೇಶಿಸಿದ್ದು, ಈ ವಿಷಯವನ್ನು ನಿಗಮದ ನೌಕರರ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲ ಹಿರಿಯ, ವಿಭಾಗ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು ಬೆಂಗಳೂರು ಮತ್ತು ಹಾಸನ, ಪ್ರಾಂಶುಪಾಲರು ಮಾಲೂರು, ಮಳವಳ್ಳಿ, ಹಾಸನ ಚಿಕ್ಕಮಗಳೂರು ಮತ್ತು ಹೊಳಲ್ಕೆರೆಯ ನಮ್ಮ ನಿಗಮ ಎಲ್ಲ ಅಧಿಕಾರಿಗಳು ಈ ಬಗ್ಗೆ ನೌಕರರಿಗೆ ತಿಳಿಯಪಡಿಸಬೇಕು ಎಂದು ಆದೇಶದಲ್ಲಿ ಸೂಚನೆ ನೀಡಿದ್ದಾರೆ.

ಇನ್ನು ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಅ.15 ರಿಂದ 19ರ ವರೆಗೆ ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ನಗರಗಳಲ್ಲಿ ಉಪವಾಸ ಸತ್ಯಾಗ್ರಹ ಹೂಡಲು ತೀರ್ಮಾನಿಸಿ ಪತ್ರವನ್ನು ನಾಲ್ಕು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಿದೆ.

ಹೀಗಾಗಿ ಕರ್ನಾಟಕ ಸರ್ಕಾರವು ಎಲ್ಲ ನಾಲ್ಕೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು “ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಎಂಬುದಾಗಿ ಘೋಷಿಸಿದ್ದು, ಅದರನ್ವಯ ಜನಸಾಮಾನ್ಯರಿಗೆ ಸಮರ್ಪಕವಾದ ಸಾರಿಗೆ ಸೌಲಭ್ಯವನ್ನು ಒದಗಿಸುವುದು ನಿಗಮದ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರ ಆದ್ಯ ಕರ್ತವ್ಯವಾಗಿದೆ. ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ಕೆಲ ನಿರ್ದೇಶನಗಳನ್ನು ನೀಡಿದ್ದಾರೆ.

Advertisement

ಅ.15 ರಿಂದ 19ರ ವರೆಗೆ ಉಪವಾಸ ಸತ್ಯಾಗ್ರಹದ ಅವಧಿಯಲ್ಲಿ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು. ಈ ದಿನಗಳಲ್ಲಿ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ರೀತಿಯ ರಜೆಯನ್ನು ಮಂಜೂರು ಮಾಡಬಾರದು.

ಉಪವಾಸ ಸತ್ಯಾಗ್ರಹದ ಅವಧಿಯಲ್ಲಿ ಕೆಲಸಕ್ಕೆ ಗೈರಾಗುವ ನೌಕರರ ವಿರುದ್ಧ “ಕೆಲಸ ಮಾಡದಿದ್ದಾಗ ವೇತನವಿಲ್ಲ” ಎಂಬ ತತ್ವದ ಪ್ರಕಾರ ಕ್ರಮ ಕೈಗೊಳ್ಳಬೇಕು. ಈ ಸೂಚನೆಗಳು ವಾರದ ರಜೆ ಮತ್ತು ದೀರ್ಘಾವಧಿ ರಜೆಯಲ್ಲಿರುವ ನೌಕರರಿಗೆ ಅನ್ವಯಿಸುವುದಿಲ್ಲ. ಆದರೆ, ಅನಿವಾರ್ಯ ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ ನೌಕರರ ವಾರದ
ರಜೆ ರದ್ದುಗೊಳಿಸಿ ಕರ್ತವ್ಯದ ಮೇಲೆ ನಿಯೋಜಿಸಬೇಕು.

ಅ.15ರಿಂದ 19ರವರೆಗೆ ಉಪವಾಸ ಸತ್ಯಾಗ್ರಹದ ದಿನಗಳಂದು ಕರ್ತವ್ಯಕ್ಕೆ ಗೈರಾಗುವ ನೌಕರರ ಪಟ್ಟಿಯಲ್ಲಿ ದಿನವಹಿ, ಘಟಕವಾರು, ವರ್ಗಾವಾರು ಸಿದ್ಧಪಡಿಸಿ ಮೇಲೆ ತಿಳಿಸಿರುವಂತೆ ಕೆಲಸ ಮಾಡದಿದ್ದಾಗ ವೇತನವಿಲ್ಲ ಎಂಬ ತತ್ವದನ್ವಯ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಂಡಿ ತಾಕೀತು ಮಾಡಿದ್ದಾರೆ.

Megha
the authorMegha

Leave a Reply

error: Content is protected !!