KSRTC ಹಾಸನ: ಬಸ್ ತಡೆದು ಟಿಕೆಟ್ ಚೆಕಿಂಗ್ ಮಾಡಲು ಹೋಗುತ್ತಿದ್ದ ತನಿಖಾಧಿಕಾರಿಗೆ ಲಾರಿ ಡಿಕ್ಕಿ – ಅಧಿಕಾರಿ ಸ್ಥಳದಲ್ಲೇ ಸಾವು

ಹಾಸನ: ಬರುತ್ತಿದ್ದ ಬಸ್ ತಡೆದು ಟಿಕೆಟ್ ಚೆಕಿಂಗ್ ಮಾಡಲು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟ್ಯಾಂಕರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚೆಕಿಂಗ್ ಇನ್ಸ್‌ಪೆಕ್ಟರ್ ಒಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಡೆದಿದೆ.

ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದ್ದು, ಈ ಅವಘಡದಲ್ಲಿ ಹಾಸನ ವಿಭಾಗೀಯ ತನಿಖಾ ಸಂಚಾರ ದಳದ ತಪಾಸಣಾ ಇನ್ಸ್‌ಪೆಕ್ಟರ್ ಶಕುನಿಗೌಡ (57) ಮೃತಪಟ್ಟಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ನಲ್ಲೂರು-ಮಗ್ಗೆ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಈ ಬಸ್ಸನ್ನು ತಡೆದು, ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸುವ ಉದ್ದೇಶದಿಂದ ಅವರು ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಲಾರಿ ಡಿಕ್ಕೆ ಹೊಡೆದ ತೀವ್ರತೆಗೆ ಶಕುನಿಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಮಾಡಿದ ಕ್ಯಾಂಟರ್ ಚಾಲಕ ವಾಹನ ಸಮೇತ ವರಾರಿಯಾಗಿದ್ದಾನೆ.
ಇತ್ತ ವಿಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಅಪಘಾತ ಮಾಡಿ ಅಧಿಕಾರಿಯ ಸಾವಿಗೆ ಕಾರಣವಾಗಿರುವ ಲಾರಿ ಮತ್ತು ಚಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
Related









