ಬೆಂಗಳೂರು: ಸರ್ಕಾರ ರಾಜ್ಯದ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಈ ಮೂಲಕ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಾಗಿಯೇ ಇದೆ. ಆದರೆ ಈಗ ಮೂಡುತ್ತಿರುವ ಪ್ರಶ್ನೆ ಅಂದರೆ ಸರ್ಕಾರ ತನ್ನ ಅಧೀನದಲ್ಲಿರುವ ಈ ನಾಲ್ಕೂ ಸಾರಿಗೆ ನಿಗಮಗಳನ್ನು ಖಾಸಗಿಯವರ ತೆಕ್ಕೆಗೆ ಹಾಕುವ ಹುನ್ನಾರ ಮಾಡುತ್ತಿದೆ ಎಂಬುವುದು.
ಈ ರೀತಿ ಅಂದುಕೊಳ್ಳುವುದಕ್ಕೆ ಬಲವಾದ ಕಾರಣವು ಇದೆ. ಅದೇನೆಂದರೆ ಸರ್ಕಾರ ಸಾರಿಗೆ ನಿಗಮಗಳ ಬಸ್ ಚಾಲಕರನ್ನು ಖಾಸಗಿ ಕ್ಷೇತ್ರದಿಂದ ನೇಮಕ ಮಾಡುತ್ತಾರೆ ಎಂಬ ಸುದ್ದಿ ಹಬ್ಬುತ್ತಿರುವುದು. ಇದನ್ನು ಗಮನಿಸಿದರೆ ಸರ್ಕಾರಿ ಬಸ್ ಖಾಸಗಿಮಯವಾಗುತ್ತಾ ಎಂಬ ಭಯ ಜನರ ಜತೆಗೆ ನೌಕರರನ್ನು ಸಹ ಕಾಡುತ್ತಿದೆ.
ಈ ಹಿಂದೆಯೇ ಎಲೆಕ್ಟ್ರಿಕ್ ವಾಹನಗಳನ್ನು ಬಿಎಂಟಿಸಿಗೆ ಸೇರ್ಪಡೆಗೊಳಿಸಿದ್ದು, ಖಾಸಗಿ ಚಾಲಕರನ್ನು ನೇಮಕ ಮಾಡಿದೆ. ಅದೇರೀತಿ ಶಕ್ತಿ ಯೋಜನೆಯಿಂದ ಉಂಟಾಗಿರುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಹೆಚ್ಚುವರಿ ಬಸ್‌ಗಳನ್ನು ಬಿಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿಯೇ ಖಾಸಗಿ ಚಾಲಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಚಾಲಕರಿಲ್ಲದೆ ಕೆಲ ಮಾರ್ಗಗಳಲ್ಲಿ ಬಸ್ ಓಡುತ್ತಿಲ್ಲ: ಕೋವಿಡ್ ಬಳಿಕ ಅದಕ್ಕೂ ಹಿಂದೆಯೂ ಸಾರಿಗೆ ಬಸ್‌ಗಳಿಗೆ ಚಾಲಕರ ನೇಮಕ ಮಾಡೇ ಇರಲಿಲ್ಲ. ಇನ್ನು ತಿಂಗಳ ಕೊನೆಯಲ್ಲಿ ನಿವೃತ್ತರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಚಾಲಕರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಮರು ನೇಮಕ ಮಾಡಿಕೊಳ್ಳುತ್ತಿಲ್ಲ.
ಈ ನಡುವೆ ಕೆಲ ಚಾಲಕರು ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕೆಲಸಕ್ಕೆ ರಾಜೀನಾಮೆ ಕೂಡ ನೀಡಿದ್ದಾರೆ. ಹೀಗೆ ಚಾಲಕರ ಕೊರತೆಯ ಸಮಸ್ಯೆ ಸಾರಿಗೆ ನಿಗಮಗಳಲ್ಲಿ ಕಾಡುತ್ತಿದೆ. ಇದನ್ನು ನೀಗಿಸುವ ಸಲುವಾಗಿ ನಿಗಮಗಳಲ್ಲಿ ಚಾಲಕರನ್ನು ನೇಮಕ ಮಾಡಿಕೊಳ್ಳದೆ, 2 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ ಚಾಲಕರನ್ನೇ ನೇಮಕ ಮಾಡಿಕೊಳ್ಳಲು ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದು, ಈ ಬಗ್ಗೆ ಟೆಂಡರ್ ಪ್ರಕ್ರಿಯೇ ಕೂಡ ನಡೆಯಲಿದೆ.
ಶಕ್ತಿ ಯೋಜನೆ ಕಾರಣವಾಯ್ತಾ?: ಈ ಖಾಸಗಿ ಚಾಲಕರ ಸಾರಿಗೆ ಇಲಾಖೆಯ ಪ್ರವೇಶ ಈ ಹಿಂದಿನ ತೀರ್ಮಾನವೇ ಆಗಿದ್ದು ಅದಕ್ಕೆ ಶಕ್ತಿ ಯೋಜನೆ ಕೂಡ ಬಲ ನೀಡಿದೆ ಎನ್ನಬಹುದು. ಶಕ್ತಿ ಯೋಜನೆ ಮೂಲಕ ಹೊಸ ಬಸ್ ಸೇರ್ಪಡೆ ಮಾಡಲಾಗಿದ್ದು ಅದು ಕೂಡ ಈ ಖಾಸಗಿ ಬಸ್ ಚಾಲಕರು ಸರ್ಕಾರಿ ಬಸ್‌ಗೆ ಲಗ್ಗೆ ಇಡುವಂತಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಜನರಿಗೂ ಕೂಡ ಭಯ ಇದೆ.
ಈ ಖಾಸಗಿ ಬಸ್ ಚಾಲಕರನ್ನೇ ನೇಮಕ ಮಾಡಿಕೊಳ್ಳಲಿ ಇದಕ್ಕೆ ಯಾರದೂ ತಕರಾರಿಲ್ಲ. ಆದರೆ, ನಿಗಮಗಳನ್ನು ಮಾತ್ರ ಖಾಸಗೀಕರಣ ಮಾಡದೆ ಸರ್ಕಾರಿ ಸ್ವಾಮ್ಯದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಹೀಗೆ ಖಾಸಗಿ ಚಾಲಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡು ಬಳಿಕ ಅವರನ್ನು ಹೊರಹಾಕುವ ಕೆಲಸವಾಗಬಾರದು.
ಅಲ್ಲದೆ ಪ್ರಮುಖವಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಇಲ್ಲಿ ದುಡಿಯುವವರಿಗೆ ಮೂರು ಕಾಸು ಕೊಟ್ಟು ಗುತ್ತಿಗೆದಾರರ ಜೇಬು ತುಂಬಿಸುವುದಕ್ಕೆ ಹೋಗಬಾರದು ಕಷ್ಟಪಟ್ಟು ದುಡಿಯುವ ಮಂದಿಗೆ ಸಂಸ್ಥೆಯಿಂದಲೇ ಅಥವಾ ಸರ್ಕಾರದಿಂದಲೇ ನೇರವಾಗಿ ವೇತನ ವಿತರಣೆಯಾಗಬೇಕು ಎಂಬುವುದು ಚಾಲಕರ ಮನದಾಳ.
ಇತ್ತ ಕಾಂಗ್ರೆಸ್ ಸರ್ಕಾರ ಕೂಡ ಈ ಹಿಂದೆ ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದ ಖಾಸಗೀಕರಣ ಮಾಡುವ ನಿಲುವನ್ನು ತಾಳುತ್ತಿದೆಯೆ. ಮೊದಲು ನಿವೃತ್ತರಾದ ಚಾಲಕರ ಸ್ಥಾನಕ್ಕೆ ಖಾಸಗಿ ಚಾಲಕರ ನೇಮಕ ಮಾಡಿಕೊಂಡು ಬಳಿಕೆ ನಾಲ್ಕೂ ನಿಗಮಗಳನ್ನು ಖಾಸಗಿಯವರ ತೆಕ್ಕೆಗೆ ಹಾಕುವ ಹುನ್ನಾರ ನಡೆಸುತ್ತಿದೆಯೇ ಎಂಬ ಅನುಮಾನ ದಟ್ಟವಾಗಿದೆ. ಇದಕ್ಕೆ ಸರ್ಕಾರವೇ ಉತ್ತರ ನೀಡಬೇಕು.