NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರರ ವೇತನ ಬೇಡಿಕೆ ಈಡೇರಿಕೆಗೆ ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಹೋಗೋಣ: ಮಹಾಮಂಡಳದ ಶರ್ಮಾಜಿ ಕರೆ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಹಾಗೂ 2020 ಜನವರಿ 1ರಿಂದ ಅನ್ವಯವಾಗುವಂತೆ ಹೆಚ್ಚಳವಾಗಿರುವ ಶೇ. 15ರಷ್ಟು ಮೂಲ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡುವಲ್ಲಿ ಮೀನಮೇಷ ಎಣಿಸುತ್ತಿರುವ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಸಂಘಟನೆಗಳು ಒಗ್ಗಟ್ಟಾಗಿ ಹೋಗೋಣ ಎಂದು ಮಹಾಮಂಡಳ ಅಧ್ಯಕ್ಷ ಡಾ.ಕೆ.ಎಸ್.ಶರ್ಮಾಜಿ ಕರೆ ನೀಡಿದ್ದಾರೆ.

ಇಂದು ಡಿ.22ರ ಸೋಮವಾರ ನಗರದಲ್ಲಿ ಭೇಟಿಯಾದ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್‌. ಚಂದ್ರಶೇಖರ್ ಮತ್ತು ಪದಾಧಿಕಾರಿಗಳು ಹಾಗೂ BMS ಸಂಘಟನೆಯ ಮುಖಂಡರ ಕುಶಲೋಪರಿ ವಿಚಾರಿಸಿ ಮುಂದಿನ ಹೋರಾಟದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.

ಈ ವೇಳೆ ವೇತನ ಸಂಬಂಧಿತ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಸಂಪೂರ್ಣ ಸಹಕಾರಕ್ಕೆ ಸಹಮತವನ್ನು ಸಾರಿಗೆ ನೌಕರರ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಸೂಚಿಸಬೇಕು. ಆ ಮೂಲಕ ಒಗ್ಗಟ್ಟಿನಿಂದ ಸರ್ಕಾರದ ಮುಂದೆ ನಮ್ಮ ಬೇಡಿಕೆಗಳನ್ನು ತೆಗೆದುಕೊಂಡು ಹೋಗಿ ಈಡೇರಿಸಿಕೊಳ್ಳಬೇಕು ಎಂದು ಶರ್ಮಾಜಿ ಸಲಹೆ ನೀಡಿದರು.

ಅಲ್ಲದೆ ಎಲ್ಲ ಸಂಘಟನೆಗಳ ಪ್ರಮುಖರೊಂದಿಗೆ ನಾವು ಕೂಡ ಚರ್ಚೆ ನಡೆಸುತ್ತೇವೆ ನೌಕರರಿಗೆ ಸಿಗಬೇಕಿರುವ ವೇತನ ಸೌಲಭ್ಯ ಸೇರಿದಂತೆ ಇತರೆ ಬೇಡಿಕೆಗಳನ್ನು ಸರ್ಕಾರ ಈಡೇರಿಸುವುದಕ್ಕೆ ನಾವು ಈಗ ಒಂದಾಗುವುದು ಬಹಳ ಮುಖ್ಯವಾಗಿದೆ. ಹೀಗಾಗಿಲ್ಲ ಎಲ್ಲರೂ ಔೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವ ಮೂಲಕ ನೌಕರರಿಗೆ ಸೌಲಭ್ಯ ಕಲ್ಪಿಸಿಕೊಡಬೇಕಿದೆ ಎಂದು ತಿಳಿಸಿದರು.

ಇತ್ತ ಇಂದಿನಿಂದ ಸಾರಿಗೆಯ ಕಾರ್ಮಿಕ ಸಂಘನೆಗಳ ಜಂಟಿ ಕ್ರಿಯಾ ಸಮಿತಿಯ ಬಹುತೇಕ ಎಲ್ಲ ಸಾರಿಗೆ ಕಾರ್ಮಿಕ ಸಂಘಟನೆಗಳ ಮುಖಂಡರು ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಘಟಕಗಳಿಗೆ ಹಾಗೂ ವಿಭಾಗೀಯ ಕಚೇರಿಗಳಿಗೆ ಭೇಟಿ ನೀಡುತ್ತಿದ್ದು, ಇನ್ನು ಕೆಲವರು ದೂರವಾಣಿ ಮೂಲಕ ಸಮಸ್ತ ನೌಕರರನ್ನು ದಿಢೀರ್‌ ಮುಷ್ಕರಕ್ಕೆ ಹೋಗುವುದಕ್ಕೆ ಬೆಂಬಲ ನೀಡುವಂತೆ ಕರೆ ನೀಡುತ್ತಿದ್ದಾರೆ.

ಇನ್ನು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್‌ನಲ್ಲಿ ಇದೇ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲಾಗಿತ್ತು. ಇದೀಗ ಮತ್ತೆ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಈ ಬಾರಿ ದಿನಾಂಕ ಘೋಷಣೆ ಮಾಡದೆ ಏಕಾಏಕಿ ಬಸ್ ನಿಲ್ಲಿಸಲು ಒಗ್ಗಟ್ಟಿನಿಂದ ಪ್ಲಾನ್ ಮಾಡಲಾಗುತ್ತಿದೆ.

ಈ ನಡುವೆ ಇಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ್ ಜಿ. ಹಣಮನ್ನವರ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಇಂದು 4 ಸಾರಿಗೆ ಸಂಸ್ಥೆಯ ನೌಕರರಿಗೂ 7ನೇ ವೇತನವನ್ನು ನಿಗದಿಪಡಿಸಬೇಕು ಹಾಗೂ ಇತರೆ ಬೇಡಿಕೆಗಳ ಈಡೇರಿಸಬೇಕು ಎಂದು ಹುಬ್ಬಳ್ಳಿಯಲ್ಲಿ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕ್ ಪಾಟೀಲ್ ಅವರು ಪ್ರಸ್ತುತ ಸಂಸ್ಥೆಯ ಪ್ರಚಲಿತ ವಿದ್ಯಮಾನಗಳು ಹಾಗೂ ನೌಕರರು/ ಅಧಿಕಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಿದ್ದು ನಮ್ಮ ಎಲ್ಲ ಬೇಡಿಕೆಗಳಿಗೆ ಉಪಾಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ತಿಳಿಸಿದ್ದಾರೆ.

ಒಟ್ಟಾರೆ ಇತ್ತ ಅಧಿಕಾರಿಗಳೂ ಅತ್ತ ಸಂಘಟನೆಗಳು ಒಂದಾದರೆ ಕಾನೂನಾತ್ಮಕವಾಗಿ ಸರ್ಕಾರದ ಮುಂದಿಟ್ಟಿರುವ ಬೇಡಿಕೆ ಈಡೇರಿಸಿಕೊಳ್ಳುವುದಕ್ಕೆ ಯಾವುದೇ ಸಮಸ್ಯೆ ಆಗದು ಎಂದು ನೌಕರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Megha
the authorMegha

Leave a Reply

error: Content is protected !!