KSRTC: ನಾವು ಸಂಘಟಿತರಾಗೋಣ, ಅದು “ಪರಾವಲಂಬಿ” ನಾಯಕರ ಕೈಗೊಂಬೆ ಆಗದೆ – ಸತ್ಯ ತಿಳಿಯಿರಿ, ಜಾಗೃತರಾಗಿ ಬಂಧುಗಳೆ!

ಬೆಂಗಳೂರು: ಸಾರಿಗೆ ನೌಕರರ ಆತ್ಮಾವಲೋಕನಕ್ಕೆ ಕಾಲ ಪಕ್ವವಾಗಿದೆ! ನಮ್ಮ ಬೆವರಿನ ಬೆಲೆ “ಹೊರಗಿನವರ” ಪಾಲಾಗುತ್ತಿದೆಯೇ?

ಸಾರಿಗೆ ಸಂಸ್ಥೆಯ ಅಚ್ಚುಮೆಚ್ಚಿನ ನೌಕರ ಬಂಧುಗಳೇ, ದಶಕಗಳಿಂದ ನಮ್ಮ ಸಂಸ್ಥೆಯಲ್ಲಿ ಒಂದು ವಿಚಿತ್ರ ಸಂಪ್ರದಾಯ ಬೆಳೆದುಬಂದಿದೆ. ಸ್ಟೇರಿಂಗ್ ಹಿಡಿದು ಮೈ..ಕೈ.. ನೋವು ತಿಂದವರಿಗಿಲ್ಲದ ಅಧಿಕಾರ, ಬಸ್ಸಿನ ಮುಖವನ್ನೇ ನೋಡದ “ಹೊರಗಿನ” ವ್ಯಕ್ತಿಗಳ ಕೈಯಲ್ಲಿದೆ. ಇದು ಕೇವಲ ನಾಯಕತ್ವವಲ್ಲ, ಇದು ನೌಕರರ ಬದುಕಿನ ಮೇಲೆ ನಡೆಯುತ್ತಿರುವ ದಶಕಗಳ ವಂಚನೆ! ದೌರ್ಜನ್ಯ!
ನೌಕರರಲ್ಲಿ ಭಾವನಾತ್ಮಕವಾಗಿ ಉದ್ರೇಕ ಹುಟ್ಟಿಸುವುದು, ನಂತರ ಮ್ಯಾನೇಜ್‌ಮೆಂಟ್ ಜೊತೆ ಒಳ ಒಪ್ಪಂದ ಮಾಡಿಕೊಂಡು ಹೋರಾಟವನ್ನು ತಣ್ಣಗಾಗಿಸುವುದು. ಕಳೆದ ಕೆಲವು ದಶಕಗಳನ್ನು ಗಮನಿಸಿದರೆ, ಪ್ರತಿ ಬಾರಿ ವೇತನ ಪರಿಷ್ಕರಣೆ ಅಥವಾ ಭತ್ಯೆಗಳ ವಿಚಾರ ಬಂದಾಗ ಈ “ಹೊರಗಿನ” ನಾಯಕರು ಅಬ್ಬರದ ಭಾಷಣ ಮಾಡುತ್ತಾರೆ. ಮುಷ್ಕರದ ಕರೆ ನೀಡುತ್ತಾರೆ. ಆದರೆ ಅಂತಿಮವಾಗಿ ಯಾವುದೋ ಒಂದು ಒಪ್ಪಂದಕ್ಕೆ ಸಹಿ ಹಾಕಿ, ನೌಕರರಿಗೆ ಸಿಗಬೇಕಾದ ಪೂರ್ಣ ಲಾಭವನ್ನು ಕಸಿದುಕೊಳ್ಳುತ್ತಾರೆ.
ಹೊರಗಿನವರ “ಮಂಕುಬೂದಿ” ಆಟ ಹೇಗಿದೆ ಗೊತ್ತೇ?: ಸಂಸ್ಥೆಗೆ ಸಂಬಂಧವಿಲ್ಲದವರ ಸವಾರಿ ನಮ್ಮ ಮೇಲೆ (ಸಾರಿಗೆ ನೌಕರರ ಮೇಲೆ) ನಿರಂತರವಾಗಿ ನಡಿತಾ ಇದೆ ಸಂಸ್ಥೆಯ ಕಷ್ಟ-ನಷ್ಟಗಳು, ಡಿಪೋಗಳ ಕಿರಿಕಿರಿ, ರಜೆಯ ಸಮಸ್ಯೆಗಳು ನಮಗಷ್ಟೇ ಗೊತ್ತು. ಆದರೆ, ನಮ್ಮ ಹೆಸರಿನಲ್ಲಿ ಸಂಘಟನೆ ಕಟ್ಟಿ ಎಸಿ ರೂಮಿನಲ್ಲಿ ಕುಳಿತು ಆದೇಶ ನೀಡುವ ಇವರಿಗೇನು ಗೊತ್ತು ನಮ್ಮ ಕಷ್ಟನಷ್ಟಗಳು?
ಇನ್ನು ನಮ್ಮ ನೋವು ಅವರಿಗೆ ಹೇಗೆ ಅರ್ಥವಾಗಲು ಸಾಧ್ಯ? ಒಬ್ಬ ಸಾಮಾನ್ಯ ಸಾರಿಗೆ ನೌಕರನಿಗೆ ಶಿಸ್ತು ಕ್ರಮದ ಭಯವಿರುತ್ತದೆ, ವರ್ಗಾವಣೆಯ ಭೀತಿ ಇರುತ್ತದೆ. ಈ ಭಯವನ್ನೇ ಬಂಡವಾಳ ಮಾಡಿಕೊಳ್ಳುವ ಹೊರಗಿನ ನಾಯಕರು, “ನಾವು ನಿಮ್ಮನ್ನು ರಕ್ಷಿಸುತ್ತೇವೆ” ಎಂಬ ಸುಳ್ಳು ಭರವಸೆ ನೀಡುತ್ತಾರೆ. ವಾಸ್ತವದಲ್ಲಿ, ಕಷ್ಟ ಬಂದಾಗ ಸಾಲಿನಲ್ಲಿ ನಿಲ್ಲುವವನು ನೌಕರನೇ ಹೊರತು ಈ ನಾಯಕರಲ್ಲ. ಅಮಾನತು ಅಥವಾ ವಜಾದಂತಹ ಕಠಿಣ ಕ್ರಮ ಎದುರಿಸುವಾಗ ಈ “ಹೊರಗಿನವರು” ಸುರಕ್ಷಿತವಾಗಿರುತ್ತಾರೆ.
ಮುಷ್ಕರ ಎಂಬ “ವ್ಯಾಪಾರ”: ಪ್ರತಿ ನಾಲ್ಕು ವರ್ಷಕ್ಕೊಂದು ಬಾರಿ ನಾವು ಹಕ್ಕುಗಳಿಗಾಗಿ ರಸ್ತೆಗೆ ಇಳಿದಾಗ, ಈ ನಾಯಕರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಆದರೆ, ಅಂತಿಮ ಹಂತದಲ್ಲಿ ನೌಕರರಿಗೆ ನ್ಯಾಯ ಕೊಡಿಸುವ ಬದಲು, ಮ್ಯಾನೇಜ್‌ಮೆಂಟ್ ಜೊತೆ ಸೇರಿ ಹೋರಾಟವನ್ನು ಹಾದಿ ತಪ್ಪಿಸುತ್ತಾರೆ. ನಂತರ ಒಳ ಒಪ್ಪಂದದಿಂದ ತಮ್ಮ ವ್ಯಾಪಾರ ಕುದುರಿಸಿಕೊಳ್ಳುತ್ತಾರೆ, ಇದು ಹೋರಾಟವೋ ಅಥವಾ ಲಾಭದ ಒಪ್ಪಂದವೋ? ಎಂಬುವುದು ನೀವು ಆಲೋಚನೆ ಮಾಡಬೇಕಾಗಿದೆ.
ಚಂದಾ ಹಣ ಎಲ್ಲಿ ಹೋಗುತ್ತಿದೆ?: ನೌಕರರ ಬೆವರಿನ ಹನಿಗಳಿಂದ ಸಂಗ್ರಹವಾಗುವ ಲಕ್ಷಾಂತರ ರೂಪಾಯಿ ಚಂದಾ ಹಣ ಎಲ್ಲಿ ಹೋಗುತ್ತಿದೆ? ಸಂಘಟನೆಯ ಪದಾಧಿಕಾರಿಗಳ ಆಸ್ತಿ ಹೆಚ್ಚಾಗುತ್ತಿದೆಯೇ ಹೊರತು, ಸಾಮಾನ್ಯ ನೌಕರನ ಆರ್ಥಿಕ ಸ್ಥಿತಿ ಇಂದಿಗೂ ಸುಧಾರಿಸಿಲ್ಲ. ಮುಷ್ಕರ ನಡೆದಾಗ ಶಿಸ್ತು ಕ್ರಮ ಎದುರಿಸುವವರು ನಾವು, ಕೆಲಸ ಕಳೆದುಕೊಳ್ಳುವವರು ನಾವು. ಆದರೆ ಈ ಹೊರಗಿನ ನಾಯಕರಿಗೆ ಯಾವುದೇ ಭಯವಿಲ್ಲ. ನೌಕರರ ಬದುಕನ್ನು ಪಣಕ್ಕಿಟ್ಟು ಇವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ನಮ್ಮ ಎಚ್ಚರಿಕೆ ನಮಗೆ ಇರಲಿ: ನಮ್ಮ ನಿಮ್ಮೆಲ್ಲರ ನೋವನ್ನು ವ್ಯಾಪಾರ ಮಾಡುವವರಿಗೆ ಅವಕಾಶ ನೀಡಬೇಡಿ. ಸಂಸ್ಥೆಯ ಒಳಗಿರುವ, ನಮ್ಮ ಕಷ್ಟ ಸುಖ ಬಲ್ಲವರೇ ನಮ್ಮ ನಾಯಕರಾಗಲಿ. ಹೊರಗಿನವರ “ಮೋಡಿ ಮಾತು”ಗಳಿಗೆ ಮರುಳಾಗುವ ಕಾಲ ಮುಗಿಯಿತು. ಬದಲಾವಣೆ ನಮ್ಮ ನಿಮ್ಮಿಂದಲೇ ಆರಂಭವಾಗಲಿ! ನಮ್ಮ ಹಕ್ಕುಗಳಿಗಾಗಿ ನಾವು ಸಂಘಟಿತರಾಗೋಣ, ಆದರೆ ಅದು “ಪರಾವಲಂಬಿ” ನಾಯಕರ ಕೈಗೊಂಬೆಯಾಗಬಾರದು. ಸತ್ಯ ತಿಳಿಯಿರಿ, ಜಾಗೃತರಾಗಿ!
ಇದು ವಿಜಯಪಥ ವರದಿಯಲ್ಲ ನೊಂದ ನೌಕರರು ತಮ್ಮ ಮನದಾಳವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದನ್ನು ನಾವು ಎಲ್ಲರಿಗೂ ತಲುಪಿಸುವ ಸಲುವಾಗಿ ಇದನ್ನು ವರದಿ ರೂಪದಲ್ಲಿ ತೆಗೆದುಕೊಂಡು ನಿಮಗೆ ನಮ್ಮ ಕಡೆಯಿಂದಲೂ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಅಲ್ಲದೆ ನಾಡಿನ ಜನತೆಗೂ ನೌಕರರ ಕೂಗು, ನೋವು ಏನಿದೆ ಎಂಬುದನ್ನು ತಿಳಿಸಬೇಕಿರುವ ನಮ್ಮ (ಮೀಡಿಯಾ) ಜವಾಬ್ದಾರಿಯಾಗಿದೆ ಅದನ್ನು ನಾವು ಮಾಡಿದ್ದೇವೆ ಅಷ್ಟೆ.
Related









