ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊತ್ತಮೊದಲಿಗೆ ಜಾರಿಗೆ ತಂದ ಶಕ್ತಿ ಯೋಜನೆಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಆದಾಯವೇನೋ ಹೆಚ್ಚಾಗಿ. ಆದರೆ, ನಷ್ಟದ ಪ್ರಮಾಣ ಮಾತ್ರ ಈ ಶಕ್ತಿಯಿಂದ ತಗ್ಗಿಸಲು ಆಗುತ್ತಿಲ್ಲ ಎಂಬುವುದೇ ಭಾರಿ ನೋವಿನ ಸಂಗತಿ.
ಹೌದು! ವರ್ಷದಿಂದ ವರ್ಷಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ನಿಗಮಗಳ ನಷ್ಟ ಏರಿಕೆಯಾಗುತ್ತಲೇ ಇದೆ. ಈವರೆಗೂ 7,625 ಕೋಟಿ ರೂಪಾಯಿ ನಷ್ಟದಲ್ಲಿವೆ ನಾಲ್ಕೂ ಸಾರಿಗೆ ಸಂಸ್ಥೆಗಳು. ರಾಜ್ಯದಲ್ಲು ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೊಂಡ ಬಳಿಕ ಸಾರಿಗೆ ನಿಗಮಗಳ ವರಮಾನದ ಶಕ್ತಿಯೇನೋ ವೃದ್ಧಿಯಾಗಿದೆ. ಆದರೆ, ನಿಗಮಗಳ ನಷ್ಟದ ಭಾರ ಮಾತ್ರ ಕಡಿಮೆಯಾಗುತ್ತಿಲ್ಲ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಹೊರತುಪಡಿಸಿ ಉಳಿದ ಮೂರು ಸಾರಿಗೆ ಸಂಸ್ಥೆಗಳ ನಷ್ಟದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ, ನಷ್ಟದ ಸುಳಿಯಿಂದ ಹೊರಬಂದು ಆದಾಯ ಗಳಿಕೆಯ ಜಾಡು ಹಿಡಿಯುವ ಲಕ್ಷಣಗಳು ಈ ಸಾರಿಗೆ ನಿಗಮಗಳಲ್ಲಿ ಕಾಣುತ್ತಿಲ್ಲ.
ಈ ಸಂಸ್ಥೆಗಳು ಕಳೆದ ಒಂದು ದಶಕದಿಂದಲೂ ನಷ್ಟದಲ್ಲಿವೆ. ಹೀಗಾಗಿ, ಒಟ್ಟಾರೆ ನಷ್ಟದ ಪ್ರಮಾಣ ಪ್ರಸ್ತುತ ವರ್ಷ 7,625.95 ಕೋಟಿ ರೂ.ಗಳಿಗೆ ಜಿಗಿದು ನಿಂತಿದೆ. ಅಲ್ಲದೆ, ಅಧಿಕಾರಿ, ಸಿಬ್ಬಂದಿ ವೇತನ ಬಾಕಿ, ಪಿಎಫ್ ಸೇರಿದಂತೆ ಸುಮಾರು 6 ಸಾವಿರ ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿವೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರಾಜ್ಯಸರ್ಕಾರವೇ ಅಧಿಕಾರಿ, ಸಿಬ್ಬಂದಿ ವೇತನಕ್ಕೆ ತಗಲುವ ವೆಚ್ಚ ಭರಿಸಿದೆ. ಅಲ್ಲದೆ, ಬಸ್‌ಗಳ ಖರೀದಿಗೂ ಸಹಾಯಧನ ಒದಗಿಸಿದೆ. ಆದಾಗ್ಯೂ, ನಿರೀಕ್ಷಿತ ಮಟ್ಟದಲ್ಲಿ ಸಂಸ್ಥೆಗಳು ಆರ್ಥಿಕ ಚೇತರಿಕೆ ಕಾಣುತ್ತಿಲ್ಲ.
ಶಕ್ತಿ ಯೋಜನೆ ಜಾರಿಗೂ ಮೊದಲು 2022-23ರಲ್ಲಿ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ 9020.13 ಕೋಟಿ ರೂ. ಆದಾಯ ಸಂಗ್ರಹವಾಗುತ್ತಿತ್ತು. ಶಕ್ತಿ ಯೋಜನೆಯ ಅನುಷ್ಠಾನದ ಬಳಿಕ ಸಂಸ್ಥೆಗಳ ವರಮಾನವು ವರ್ಷಕ್ಕೆ 11,103.43 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. 2023ರ ಜೂ.11 ರಿಂದ 2024ರ ಸೆ.25 ರವರೆಗೆ 297.25 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯವು 7,166.08 ಕೋಟಿ ರೂ. ಆಗಿದೆ.
ನಾಲ್ಕೂ ನಿಗಮಗಳ ನಷ್ಟದ ಹೊರೆ: ಆದರೂ ಒಟ್ಟಾರೆ ನಷ್ಟ 7625.95 ಕೋಟಿ ರೂಪಾಯಿ ತಲುಪಿದೆ ಎಂದರೆ ಇದನ್ನು ನಂಬುವುದಕ್ಕೆ ಅಸಾಧ್ಯ. ಆದರೂ ಒಪ್ಪಿಕೊಳ್ಳದೆ ಬೇರೆ ವಿಧಿಯಿಲ್ಲ ಎನ್ನುವಂತಾಗಿದೆ. ಇನ್ನು ಕೆಎಸ್‌ಆರ್‌ಟಿಸಿ 1,815.83 ಕೋಟಿ ರೂ., ಬಿಎಂಟಿಸಿ 2,056.30 ಕೋಟಿ ರೂ., ವಾಯವ್ಯ 2,299.30 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು 1,454.52 ಕೋಟಿ ರೂ. ನಷ್ಟದಲ್ಲಿದೆ.
ಇದಲ್ಲದೆ, ಸಿಬ್ಬಂದಿಯ ತುಟ್ಟಿಭತ್ಯೆ ಬಾಕಿ 330 ಕೋಟಿ ರೂ., ನಿವೃತ್ತ ನೌಕರರ ಉಪಧನ, ರಜೆ ನಗದೀಕರಣ 400 ಕೋಟಿ, ಭವಿಷ್ಯ ನಿಧಿ 2,452 ಕೋಟಿ, 2020ರ ಜ.1 ರಿಂದ 2023ರ ಫೆ.28ರವರೆಗಿನ ವೇತನ ಹೆಚ್ಚಳದ ಬಾಕಿ 1,785 ಕೋಟಿ, ಬಿಡಿಭಾಗಗಳ ಪೂರೈಕೆದಾರರಿಗೆ 495 ಕೋಟಿ, ಇಂಧನ ಪೂರೈಕೆ ಕಂಪನಿಗಳಿಗೆ 600 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ.
ಸರ್ಕಾರದಿಂದ ಬಿಡುಗಡೆಯಾಗಬೇಕಿದೆ ಮಹಿಳೆಯರ ಉಚಿತ ಪ್ರಯಾಣದ 1542.33 ಕೋಟಿ ರೂಪಾಯಿ. ನೋಡಿ ಶಕ್ತಿ ಯೋಜನೆ ಜಾರಿಗೊಂಡ ದಿನದಿಂದ ಅಂದರೆ 2023ರ ಜೂ.11ರಿಂದ ಆಗಸ್ಟ್ ಅಂತ್ಯದವರೆಗೆ ಉಚಿತ ಪ್ರಯಾಣ ಸೌಲಭ್ಯ ಪಡೆದಿರುವ ಮಹಿಳೆಯರ ಟಿಕೆಟ್ ಮೌಲ್ಯದ 6,831.67 ಕೋಟಿ ರೂ. ಪೈಕಿ ರಾಜ್ಯ ಸರ್ಕಾರ 5,289.34 ಕೋಟಿ ರೂ.ಗಳನ್ನು ನಾಲ್ಕೂ ನಿಗಮಗಳಿಗೆ ಪಾವತಿ ಮಾಡಿದೆ. ಆದರೆ ಇನ್ನೂ 1,542.33 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು ಅದನ್ನಿ ಈವರೆಗೂ ಬಿಡುಗಡೆ ಮಾಡಿಲ್ಲ.
ನಾಲ್ಕೂ ಸಾರಿಗೆ ನಿಗಮಗಳ ನಷ್ಟದ ವಿವರ: ಕೆಎಸ್‌ಆರ್‌ಟಿಸಿ – 1815.83 ಕೋಟಿ ರೂಪಾಯಿ. ಬಿಎಂಟಿಸಿ – 2056.30 ಕೋಟಿ ರೂಪಾಯಿ. ಎನ್‌ಡಬ್ಲ್ಯೂಕೆಆರ್‌ಟಿಸಿ – 2299.30 ಕೋಟಿ ರೂಪಾಯಿ ಹಾಗೂ ಕೆಕೆಆರ್‌ಟಿಸಿ – 1454.52 ಕೋಟಿ ರೂಪಾಯಿ ನಷ್ಟದಲ್ಲೇ ತವಳುತ್ತ ಸಾಗುತ್ತಿವೆ. ಇವುಗಳಿಗೆ ಜೀವ ತುಂಬಬೇಕಿರುವ ಸರ್ಕಾರ ಮಾತ್ರ ಕೊಡಬೇಕಿರುವ ಅನುದಾನವನ್ನು ಕೊಡದೆ ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿರುವುದು ಮಾತ್ರ ಬೇಸರದ ಸಂಗತಿಯಾಗಿದೆ.