ಮಂಡ್ಯ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಹತ್ತುವಾಗ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಪರ್ಸ್ ಕಳ್ಳತನದ ಪ್ರಕರಣ ನಗರದ KSRTC ಬಸ್ ನಿಲ್ದಾಣದಲ್ಲಿ ಜರುಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆ ಗ್ರಾಮದ ಮಹೇಶ್ ಅವರ ಪುತ್ರಿ ಮದ್ದೂರು ತಾಲೂಕಿನ ಬೋಳಾರೆ ಗ್ರಾಮದ ಹರೀಶ್ ಎಂಬುವ ಪತ್ನಿ ಲಕ್ಷ್ಮೀ ಅವರೇ ಸುಮಾರು 45 ಗ್ರಾಂ ಚಿನ್ನಾಭರಣ ಕಳೆದುಕೊಂಡವರು.
ಲಕ್ಷ್ಮೀ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಪರ್ಸ್ ಅನ್ನು ಬಸ್ ಹತ್ತುತ್ತಿದ್ದಾಗ ಖದೀಂ ಕಳ್ಳವು ಮಾಡಿದ್ದಾನೆ. ಅದರಲ್ಲಿ 2.80 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳಿದ್ದವು ಎಂದು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಲಕ್ಷ್ಮೀ ಅವರು ಮೈಸೂರು ಜಿಲ್ಲೆ, ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಚಾಮನಹಳ್ಳಿ ಗ್ರಾಮದ ಸಂಬಂಧಿಕ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮದ್ದೂರು ತಾಲೂಕಿನ ಬೋಳಾರೆಗೆ ಹಿಂತಿರುಗುತ್ತಿದ್ದರು.
ಈ ವೇಳೆ ಬನ್ನೂರಿನಿಂದ ಮಂಡ್ಯಕ್ಕೆ ಹೋಗಿ ಅಲ್ಲಿಂದ ಬೋಳಾರೆಗೆ ಹೋಗಲು ಮಂಡ್ಯ-ಕೊಪ್ಪ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಾರೆ. ಈ ವೇಳೆ ಬ್ಯಾಗ್‌ನಲ್ಲಿದ್ದ ಪರ್ಸ್ ಕಳುವಾಗಿದೆ. ಕೂಡಲೇ ಈ ವಿಷಯವನ್ನು ಕಂಡಕ್ಟರ್ ಗಮನಕ್ಕೆ ತಂದಿದ್ದಾರೆ.
ನಿರ್ವಾಹಕರು ಕೂಡ ತಡ ಮಾಡದೆ ಚಾಲಕರಿಗೆ ಹೇಳಿ ಬಸ್‌ನ ಡೋರ್ ಹಾಕಿಸಿ ಮಂಡ್ಯ ಪೊಲೀಸ್ ಠಾಣೆಗೆ ಪ್ರಯಾಣಿಕರ ಸಹಿತ ಬಸ್ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸ್ ಸಿಬ್ಬಂದಿ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಚೆಕ್ ಮಾಡಿದ್ದಾರೆ. ಆದರೆ ಕಳೆದುಕೊಂಡ ಚಿನ್ನಾಭರಣಗಳು ಪತ್ತೆಯಾಗಲಿಲ್ಲ.
ಇನ್ನು ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಬ್ಯಾಗ್‌ನಲ್ಲಿದ್ದ ಪರ್ಸ್ ಕಳವು ಮಾಡಿದ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ.