NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 38 ತಿಂಗಳ ವೇತನ ಹಿಂಬಾಕಿಗೆ ಆಗ್ರಹಿಸಿ ನಾಳೆ ನಿನೌಹಿರ ವೇದಿಕೆಯಿಂದ ಸಾರಿಗೆ ನೌಕರರ ಬೃಹತ್‌ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ (ಕೆಎಸ್ಆರ್‌ಟಿಸಿ ) ನೌಕರರು ಬೆಂಗಳೂರು ಚಲೋ ಬೃಹತ್ ಪ್ರತಿಭಟನಾ ಸಮಾವೇಶವನ್ನು ನಗರದ ಫ್ರೀಡಂ ಪಾರ್ಕ್ ಮೈದಾನದಲ್ಲಿ ಹಮ್ಮಿಕೊಂಡಿದ್ದಾರೆ.

ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನಿವೃತ್ತ ನೌಕರರ ಹಿತ ರಕ್ಷಣಾ ವೇದಿಕೆ ಈ ಹೋರಾಟವನ್ನು ಆಯೋಜಿಸಿದೆ.

ಈ ಹೋರಾಟ ನಮ್ಮ ಕಾರ್ಯಕ್ರಮ ಅಂದರೆ ಸಾರಿಗೆ ನಿವೃತ್ತ, ಹಾಲಿ ನೌಕರರ ಕಾರ್ಯಕ್ರವಾಗಿದ್ದು, ಕೆಎಸ್‌ಆರ್‌ಟಿಸಿ ಹಾಲಿ, ನಿವೃತ್ತ ನೌಕರರಿಗೆ ಆಗಿರುವಷ್ಟು ಅನ್ಯಾಯ ಬೇರೆ ಯಾವುದೇ ಸಂಸ್ಥೆಯ ನೌಕರರಿಗೆ ಅದರಲ್ಲೂ ನಿವೃತ್ತರಿಗೆ ಆಗಿಲ್ಲ.

ಸಂಸ್ಥೆಯ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೆರಿಸಿದ ನೌಕರರನ್ನು ರಾಜ್ಯ ಸರ್ಕಾರ ಕಡೆಗಣಿಸಿರುವುದು ಎಷ್ಟು ಸರಿ?. ರಾಜ್ಯದಲ್ಲಿ ಹಲವಾರು ಸಾರಿಗೆ ನೌಕರರ ಕಾರ್ಮಿಕ ಸಂಘಟನೆಗಳು ಇದ್ದರೂ ಸಹ, ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ನಿವೃತ್ತರು ಇಂದು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಈ ಸಂಘಟನೆಗಳ ಮುಖಂಡರೆನಿಸಿಕೊಂಡವರಿಗೆ ಹಾಗೂ ಸರ್ಕಾರವೂ ಸೇರಿದಂತೆ ಯಾರಿಗೂ ಶೋಭೆ ತರುವುದಿಲ್ಲ.

ಹೀಗಾಗಿ ಇನ್ನಾದರೂ ಎಚ್ಚೆತ್ತುಕೊಂಡು ಎಲ್ಲ ಸಂಘಟನೆಗಳ ಮುಖಂಡರು ನಿವೃತ್ತ ನೌಕರರ ಹಿತ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಬೆಂಬಲಿಸಬೇಕಿದೆ ಎಂದು ವೇದಿಕೆ ಪರವಾಗಿ ಎಲ್ಲ ನಿವೃತ್ತ ನೌಕರರು ಒತ್ತಾಯಿಸಿದ್ದಾರೆ.

ಇನ್ನು ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ತನ್ನ ಹಲವಾರು ಪ್ರತಿಭಟನೆ ಹಾಗೂ ಮಾಸಿಕ ಸಭೆಗಳಲ್ಲಿ, ತನ್ನ ಎಲ್ಲ ಇಪಿಎಸ್ ನಿವೃತ್ತ ನೌಕರರಿಗೆ ಕರೆ ನೀಡಿ, ಇಡೀ ರಾಜ್ಯದಲ್ಲಿಯೇ ಬೃಹತ್ ಸಂಖ್ಯೆಯಲ್ಲಿರುವ ನಾವೆಲ್ಲರೂ ಒಟ್ಟಾಗಿ ಹೋದಲ್ಲಿ, ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ನಮ್ಮ ಗುರಿ ನಿಶ್ಚಿತ. ಈಗಲಾದರೂ ನಾವೆಲ್ಲರೂ ಒಟ್ಟಾಗಿ ಸಾಗೋಣ ಎಂದು ಕರೆ ನೀಡಿದೆ.

ರಾಜ್ಯ ಸರ್ಕಾರ ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತ ಕೆಎಸ್‌ಆರ್‌ಟಿಸಿ ನೌಕರರ 38 ತಿಂಗಳ ವೇತನ ಪರಿಷ್ಕರಣಾ ಬಾಕಿ ಇತರೆ ಸೇವಾ ಭತ್ಯೆಗಳನ್ನು ನೀಡದೆ, ನೌಕರರು ತಮ್ಮ ಸಂಧ್ಯಾ ಕಾಲದಲ್ಲಿ ಹೋರಾಟಕ್ಕೆ ಇಳಿಯುವಂತೆ ಮಾಡಿರುವುದು ಅತ್ಯಂತ ವಿಪರ್ಯಾಸ. ಅಂದು, ಇಂದು, ಎಂದೆಂದಿಗೂ ಹೋರಾಟವೇ ನಿವೃತ್ತರ ಬದುಕು ಎಂಬಂತಾಗಿದೆ. ಇದು ಸರ್ಕಾರಕ್ಕೆ ನಾಚಿಕೆಯಾಗಬೇಕು.

ಇದೆಲ್ಲವನ್ನು ಪಡೆಯುವುದಕ್ಕಾಗಿಯೇ ನಾಲ್ಕೂ ಸಾರಿಗೆ ನಿಗಮಗಳ (ಕೆಎಸ್‌ಆರ್‌ಟಿಸಿ) ನಿವೃತ್ತ ನೌಕರರು ಇದೇ ಜನವರಿ 13ರ ಮಂಗಳವಾರ ಅಂದರೆ ನಾಳೆ ಬೆಳಗ್ಗೆ 11 ಗಂಟೆಗೆ ನಗರದ ಫ್ರೀಡಂ ಪಾರ್ಕ್ ಮೈದಾನದಲ್ಲಿ ಜರುಗುವ 4 ಸಾರಿಗೆ ನಿಗಮಗಳ ನಿವೃತ್ತ ನೌಕರರ ಹಿತ ರಕ್ಷಣಾ ವೇದಿಕೆ ಏರ್ಪಡಿಸಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ, ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ, ನಿವೃತ್ತ ನೌಕರರ ಸಂಫದ ಅಧ್ಯಕ್ಷ ನಂಜುಂಡೇಗೌಡ ಕರೆ ನೀಡಿದ್ದಾರೆ.

Megha
the authorMegha

Leave a Reply

error: Content is protected !!