
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಈ ಬಾರಿ ಮಾರ್ಚ್ ವೇತನವನ್ನು ಏಪ್ರಿಲ್ 2ರಂದು ಪಾವತಿಸಲು ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಆದೇಶ ಹೊರಡಿಸಿರುವ ಅವರು, ಮಾರ್ಚ್ ತಿಂಗಳ ವೇತನದ ಜತೆಗೆಯಲ್ಲೇ 2023-2024 ನೇ ಸಾಲಿನ ಗಳಿಕೆ ರಜೆ ನಗದೀಕರಣ ಪಾವತಿಸಬೇಕು ಎಂದು ಮಾ.18ರಂದು ಆದೇಶ ಹೊರಡಿಸಿದ್ದಾರೆ.
ಪ್ರತಿ ತಿಂಗಳ ಮೊದಲನೆಯ ದಿನ ಅಂದರೆ 1ರಂದೆ ಸಂಸ್ಥೆಯ ನೌಕರರಿಗೆ ವೇತನ ಪಾವತಿಸಲಾಗುತ್ತಿತ್ತು. ಆದರೆ ಈ ಬಾರಿ ಮಾ.30 ಭಾನುವಾರ, ಮಾ.31ರಂದು ಸಾರ್ವತ್ರಿಕ ರಜೆ ಮತ್ತು ಏಪ್ರೀಲ್ 1ರಂದು ಬ್ಯಾಂಕ್ ವ್ಯವಹರಿಸದೇ ಇರುವುದರಿಂದ ಮಾರ್ಚ್-2025 ರ ಮಾಹೆಯ ವೇತನವನ್ನು ಏಪ್ರೀಲ್2ರಂದು ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವೇತನದೊಂದಿಗೆ 2023-2024 ರ ಸಾಲಿನ ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಎಲ್ಲಾ ಅರ್ಹ ಅಧಿಕಾರಿ/ಸಿಬ್ಬಂದಿಗಳಿಗೆ ಸೇರಿಸಿ ಪಾವತಿಸಲು ಹಾಗೂ ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ಸಿಬ್ಬಂದಿಗಳಿಗೆ ದಿನಾಂಕ 11.04.2025 ರಂದು ಧನಾದೇಶದ ಮೂಲಕ ಪಾವತಿಸಲು ಆದೇಶಿಸಿದ್ದಾರೆ.
ಎಲ್ಲಾ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಾರ್ಯಾಗಾರ/ಕಾರ್ಯ ನಿರ್ವಾಹಕ ಅಭಿಯಂತರರು ತಪ್ಪದೆ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಈ ವಿಷಯವನ್ನು ಸಂಬಂಧಪಟ್ಟ ನಿರ್ದೇಶಕರು (ಸಿ & ಜಾ), ಎಲ್ಲ ಇಲಾಖಾ ಮುಖ್ಯಸ್ಥರು, ಉಪ ಮುಖ್ಯ ಲೆಕ್ಕಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಆಪ್ತ ಕಾರ್ಯದರ್ಶಿ ಅವರಿಗೆ ಮಾಹಿತಿಗಾಗಿ ಆದೇಶದ ಪ್ರತಿ ರವಾನಿಸಲಾಗಿದೆ.