KSRTC: ಇಂದು ಸಂಜೆ ಸಿಎಂ ಅಧ್ಯಕ್ಷತೆಯಲ್ಲಿ ಸಾರಿಗೆ ನೌಕರರ ವೇತನ ಹೆಚ್ಚಳ ಸಂಬಂಧ ಸಭೆ- ಭಾರಿ ನಿರೀಕ್ಷೆ..!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಿಎಂ ಅಧ್ಯಕ್ಷತೆಯಲ್ಲಿ ಇಂದು ನೌಕರರ ಸಂಘಟನೆಗಳ ಸಭೆಯನ್ನು ವಿಧಾನಸೌಧದಲ್ಲಿ ಕರೆಯಲಾಗಿದೆ.

ಸಿಎಂ ಬದಲಾವಣೆ ಚರ್ಚಿಯಲ್ಲಿರುವ ಈ ಹೊತ್ತಿನಲ್ಲಿ ಕರೆದಿರುವ ಈ ಸಭೆಯಲ್ಲಿ ನೌಕರರಿಗೆ ಒಳ್ಳೆದಾಗುವಂತಹ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಭಾರಿ ನಿರೀಕ್ಷೆಯಲ್ಲಿ ನೌಕರರು ಕಾದು ಕುಳಿತ್ತಿದ್ದಾರೆ.
KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಅವರು ಸಭೆ ನಡೆಯುವ ಬಗ್ಗೆ ಮಾಹಿತಿ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಮೂರನೇ ಮಹಡಿಯ 313ನೇ ಕೊಠಡಿಯಲ್ಲಿ ಸರ್ಕಾರದ ನಿರ್ದೇಶನದಂತೆ ಸಭೆ ನಿಗದಿಪಡಿಸಲಾಗಿದ್ದು, ಎಲ್ಲ ಸಂಘಟನೆಗಳ ತಲಾ ಇಬ್ಬರು ಪದಾಧಿಕಾರಿಗಳು ಹಾಜರಾಗಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಭೆ ಇಂದು ಸಂಜೆ 4 ಗಂಟೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೊಂದಿಗೂ ಹಾಗೂ ಮಧ್ಯಾಹ್ನ 4.30ಕ್ಕೆ ನೌಕರರ ಒಕ್ಕೂಟದೊಂದಿಗೆ ನಡೆಯಲಿದೆ. ಸಭೆಯಲ್ಲಿ ಮುಖ್ಯಮಂತ್ರಿಗಳು ಕೂಡ ನಮ್ಮ ಬಗ್ಗೆ ಕಾಳಜಿವಹಿಸಬೇಕು. ಅದರಂತೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಹಾಗೂ ನೌಕರರ ಒಕ್ಕೂಟದ ಪದಾಧಿಕಾರಿಗಳು ಕೂಡ ಅಳೆದುತೂಗಿ ನೌಕರರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ವೇತನ ಹೆಚ್ಚಳವಾಗಿದ್ದು ಅದರ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಮಾಡಬೇಕು. ಜತೆಗೆ ಇದರ ಹಿಂಬಾಕಿಯನ್ನು ಕೊಡಬೇಕು. ಆ ನಿಟ್ಟಿನಲ್ಲಿ ಸರ್ಕಾರವು ತೀರ್ಮಾನ ತೆಗೆದುಕೊಳ್ಳಬೇಕು ಮತ್ತು ಸಂಘಟನೆಗಳ ಪದಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ಕಡೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಇಳಿಯಲಿದ್ದಾರೆ ಎಂಬ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು, ಈ ನಡುವೆಯೂ ಸಾರಿಗೆ ನೌಕರರ ವೇತನ ಸಂಬಂಧ ಚರ್ಚಿಸಲು ಕರೆದಿರುವ ಸಭೆಯಲ್ಲಿ ಸಿಎಂ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆದರೆ, ಖಚಿತವಾಗಿಲ್ಲ.
ಇನ್ನು ಸಾರಿಗೆ ಸಚಿವರು ಸಾರಿಗೆ ನೌಕರರ ಸಂಘಟನೆಗಳು ಕೂಡ ನಮ್ಮಜತೆ ಸಹಕರಿಸಿದರೆ ಸಮಸ್ಯೆಗೆ ಪರಿಹಾರಕೊಡಬಹುದು ಎಂಬ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇಂದು ಸಂಜೆ ನಡೆಯುವ ಸಭೆ ಭಾರಿ ಕುತೂಹಲವನ್ನು ಮೂಡಿಸಿದೆ.
Related









