ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಮತ್ತು ನೌಕರರಿಗೆ ಕೊಡಬೇಕಾಗಿರುವ ಬಾಕಿ ಹಣ. ಈ ವೆಚ್ಚಗಳನ್ನು ಭರಿಸಲು, ಸರ್ಕಾರದಿಂದ ಅನುದಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಇಂದು (ಶುಕ್ರವಾರ) ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
2020 ಜನವರಿ 1ರಿಂದ ಅನ್ವಯವಾಗುವಂತೆ ಜಾರಿಯಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನೂ ಈವರೆಗೂ ನೀಡುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ತಮ್ಮ ನಿರ್ಧಾರವನ್ನು ತಿಳಿಸಬೇಕು ಎಂದು ನಗರದಲ್ಲಿ ಇಂದು ಸಚಿವರನ್ನು ಭೇಟಿ ಜಂಟಿ ಕ್ರಿಯಾಸಮಿತಿ ಮಾಡಿದ ಪದಾಧಿಕಾರಿಗಳು ಆಗ್ರಹಿಸಿದರು.
ಈ ವೇಳೆ ಸಚಿವ ರಾಮಲಿಂಗಾರೆಡ್ಡಿ ಅವರು ನನಗೆ ಸೋಮವಾರದ (ನವೆಂಬರ್20) ವರೆಗೆ ಸಮಯಕೊಡಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿಮಗೆ ತಿಳಿಸುತ್ತೇನೆ ಎಂದಷ್ಟೇ ಹೇಳಿ ಮತ್ತೆ ಅದೇ ಹಳೇ ಭರವಸೆಯನ್ನೇ ಕೊಟ್ಟಿದ್ದಾರೆ. ಅಂದರೆ, ಈಗಲೂ ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಏನನ್ನೂ ಹೇಳಿಲ್ಲ ಎಂದು ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಮೊನ್ನೆ ನಿವೃತ್ತ ನೌಕರರು ಸಾರಿಗೆ ಸಚಿವರನ್ನು ಭೇಟಿ ಮಾಡಲು ಹೋದಾಗ ಅವರೊಂದಿಗೂ ಸರಿಯಾಗಿ ಮಾತನಾಡಿಲ್ಲ. ಜತೆಗೆ ನಿಮ್ಮ ಸಮಸ್ಯೆ ಬಗ್ಗೆ ಎಂಡಿ ಅವರನ್ನು ಕೇಳಿ ಎಂದು ಹೇಳಿ ತಮ್ಮ ಜವಾಬ್ದಾರಿಯಿಂದ ಜಾರಿಕೊಂಡಿದ್ದರು. ಇತ್ತ ಎಂಡಿ ಅವರಿಗೆ ಕಾದುಕಾದು ಸುಸ್ತಾಗಿ ಸಿಗಲಿಲ್ಲವೆಂದು ಕೊನೆಗೆ ಅಂದು ನಿವೃತ್ತ ನೌಕರರು ವಾಪಸ್ ಆಗಿದ್ದರು.
ಆದರೆ, ಇಂದು ಸಚಿವರು ಜಂಟಿ ಕ್ರಿಯಾಸಮಿತಿ ಪದಾಧಿಕಾರಿಗಳಿಗೆ ಸಿಕ್ಕಿ ಮಾತನಾಡಿದರೂ ಕೂಡ ಮತ್ತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆಯೆ ಹೇಳಿ ನೀಡಿದ್ದಾರೆ. ಅಂದರೆ, ಇವರು ಸಾರಿಗೆ ಇಲಾಖೆಯ ಸಚಿವರೋ ಅಥವಾ ಇನ್ಯಾರೋ ಎಂಬುವುದು ತಿಳಿಯುತ್ತಿಲ್ಲ. ತಮ್ಮದೇ ಇಲಾಖೆಯಲ್ಲಿ ಕಾನೂನಾತ್ಮಕವಾಗಿ ತೆಗೆದುಕೊಳ್ಳಬೇಕಿರುವ ನಿರ್ಧಾರದ ಬಗ್ಗೆ ಇಷ್ಟೊಂದು ಮೀನಮೇಷ ಎಣಿಸುತ್ತಿರುವುದನ್ನು ನೋಡಿದರೆ ನಮಗೂ ಆಶ್ಚರ್ಯವಾಗುತ್ತಿದೆ ಎಂದು ಸಂಘಟನೆಗಳ ಪದಾಧಿಕಾರಿಗಳೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಸಾರಿಗೆ ನಿಗಮಗಳು ಆರ್ಥಿಕವಾಗಿ ದುರ್ಬಲವಾಗುತ್ತಿರುವುದಕ್ಕೆ ನಿರ್ವಹಣ ವೆಚ್ಚಗಳು ಕಾರಣವೇ ಹೊರತು ಯಾವುದೇ ರೀತಿಯಲ್ಲಿಯೂ ಈ ಸಂಸ್ಥೆಯಲ್ಲಿ ದುಡಿಯುತ್ತಿರುವ ನೌಕರರಲ್ಲ. ನಾವು ಇದರ ವಿವರಗಳನ್ನು ಈಗಾಗಲೇ ಏಕ ಸದಸ್ಯ ಸಮಿತಿಯ ಅಧ್ಯಕ್ಷತೆ ಎಂ.ಆರ್. ಶ್ರೀನಿವಾಸಮೂರ್ತಿ ಅವರ ಮುಂದೆ ಬಿಚ್ಚಿಟ್ಟಿದ್ದೇವೆ. ಆದ್ದರಿಂದ ಅವುಗಳನ್ನು ಮತ್ತೆ ಪುನರುಚ್ಚರಿಸಲು ಬಯಸುವದಿಲ್ಲ.
ಆದರೂ ಕೂಡ ಸಂಂಸ್ಥೆಯ ನೌಕರರಿಗೆ ಅಪಾರ ಪ್ರಮಾಣದಲ್ಲಿ ಹಿಂಬಾಕಿ ಹಣ ಕೊಡಬೇಕಿದೆ. ಅದಕ್ಕಾಗಿ ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಈ ಬಗ್ಗೆ ನಾವು ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದು ಹೀಗೆ ಮುಂದುವರಿದರೆ ಮತ್ತೆ ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾಗ ತಿಳಿಸಿದ್ದಾರೆ.
ನೌಕರರು ಆತಂಕ ಮತ್ತು ಆಕ್ರೋಶದಲ್ಲಿದ್ದಾರೆ: 07.10.2023 ರಂದು ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಮನವಿ ಕೊಟ್ಟ ಸಂದರ್ಭದಲ್ಲಿ, ಅವರು ತಮ್ಮೊಡನೆ ಚರ್ಚಿಸಲು ಸೂಚಿಸಿದರು. ನಿಮ್ಮ ಬಳಿ ಮಾತನಾಡಿದರೂ ಈವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ. ಹೀಗಾಗಿ ಈ ಬೇಡಿಕೆಗಳು ಇತ್ಯರ್ಥವಾಗದಿರುವ ಬಗ್ಗೆ ರಾಜ್ಯಾದ್ಯಂತ ನೌಕರರು ಆತಂಕ ಮತ್ತು ಆಕ್ರೋಶದಲ್ಲಿ ಇದ್ದಾರೆ.
ಬಹಳ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಸಾರಿಗೆ ನಿಗಮಗಳ ನೌಕರರು ಸಂಸ್ಥೆಯ ಏಳಿಗೆಗಾಗಿ ನಿಷ್ಠೆಯಿಂದ ಶ್ರಮಿಸುತ್ತಿದ್ದಾರೆ. ಆದ್ದರಿಂದ ತಾವು ಕೂಡಲೇ ಮಾತುಕತೆ ಆರಂಭಿಸಿ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಬೇಕೆಂದು ಜಂಟಿ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಜಂಟಿ ಕ್ರಿಯಾ ಸಮಿತಿಯ ಬೇಡಿಕೆಗಳು ಏನು?: ಹಿಂದಿನ ಸರ್ಕಾರವು 2020 ರಿಂದ ಸಮಸ್ತ ನೌಕರರಿಗೂ ಶೇ.15 ರಷ್ಟು ವೇತನ ಹೆಚ್ಚಳ ಮಾಡಿದೆ. ಆ ವೇತನ ಹೆಚ್ಚಳ ಜಾರಿಯಾಗಿದ್ದರೂ ಕೂಡ (01-0 2020 ರಿಂದ 28-02-2023ರ ವರೆಗಿನ 38 ತಿಂಗಳ ವೇತನ ಹೆಚ್ಚಳದ ಬಾಕಿಯನ್ನು ಕೊಟ್ಟಿಲ್ಲ
ಅಲ್ಲದೆ ಈ ಅವಧಿಯಲ್ಲಿ ಹಲವಾರು ನೌಕರರು ನಿವೃತ್ತಿ, ಸ್ವಯಂ ನಿವೃತ್ತಿ, ರಾಜೀನಾಮೆ ನೀಡಿದ್ದಾರೆ. ವಜಾಗೊಂಡಿರುವುದು ಸೇರಿ ಇತ್ಯಾದಿ ಕಾರಣಗಳಿಗೆ ಸೇವಾ ವಿಮುಕ್ತಿ ಹೊಂದಿರುವ ನೌಕರರಿಗೆ ದಿನಾಂಕ 17 -3- 2023 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಪ್ರಸ್ತಾವನೆಯಿಲ್ಲದ ಕಾರಣ, ಪೇ ಫಿಕ್ಸೆಷನ್ ಮಾಡಿಲ್ಲ, ಇದರಿಂದ ನೌಕರರು ಹೊಸ ವೇತನದ ಹೆಚ್ಚಳ ಮತ್ತು ಇತರೆ ಆರ್ಥಿಕ ಸವಲತ್ತುಗಳಿಂದ ವಂಚಿತರಾಗಿದ್ದಾರೆ.
ಭವಿಷ್ಯನಿಧಿ ವಂತಿಗೆ, ಗ್ರಾಚ್ಯುಟಿ, ರಜಾ ನಗದೀಕರಣ, ತುಟ್ಟಿ ಭತ್ಯೆ, ಸಹಕಾರ ಸಂಘಗಳ ಬಾಕಿ, ಜೀವವಿಮೆ ಪ್ರೀಮಿಯಂ ಇತ್ಯಾದಿಗಳ ಬಾಕಿ 2000 ಕೋಟಿ ರೂಪಾಯಿಗಳನ್ನು ಮೀರುತ್ತದೆ. ಶಕ್ತಿ ಯೋಜನೆಗೆ ನಿಗಮಗಳು ವೆಚ್ಚ ಮಾಡುತ್ತಿರುವ ಹಣವನ್ನು ಕಾಲ ಕಾಲಕ್ಕೆ ಸಂಪೂರ್ಣವಾಗಿ ಕೊಡಬೇಕು. ಈಗ ಬಾಕಿ ಉಳಿದಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.
ಇನ್ನು ಎಲ್ಲ ಸಾರಿಗೆ ನಿಗಮಗಳಲ್ಲಿಯೂ ಕಾರ್ಮಿಕ ಸಂಘಟನೆಗಳೊಂದಿಗೆ ಕಾಲ ಕಾಲಕ್ಕೆ ದ್ವಿಪಕ್ಷೀಯ ಮಾತುಕತೆ ನಡೆಸಿ, ನೌಕರರ ಸಮಸ್ಯೆಗಳನ್ನು ಬಗೆಹರಿಸುವ ವ್ಯವಸ್ಥೆ ಜಾರಿಗೆ ತರಬೇಕು. ಏಪ್ರಿಲ್ 2021 ರ ಮುಷ್ಕರದ ಸಂದರ್ಭದಲ್ಲಿ ವಜಾ ಆಗಿರುವ ನೌಕರರನ್ನು ಮತ್ತು FIR ಆಗಿರುವ ಕಾರ್ಮಿಕರನ್ನೂ ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು.