ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಅನೇಕ ನೌಕರರ ಸಂಘಟನೆಗಳು ಕೆಲಸ ಮಾಡುತ್ತಿವೆ, ಇಂದು ನಿಗಮದ ನೌಕರರೂ ಕೂಡ ಹಿಂದೆಂದೂ ಇಲ್ಲದಂತಹ ಅಪಾರವಾದ ನೋವಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಅರಿತುಕೊಂಡು ಕೂಡಲೇ ಕಾರ್ಯಪ್ರವೃತ್ತರಾಗಲು ನೌಕರರ ಸಂಘಗಳು ಒಗ್ಗೂಡಬೇಕು.
ಈ ಮೂಲಕ ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ಕೊಡಬೇಕು ಜತೆಗೆ 38 ತಿಂಗಳ ವೇತನ ಹೆಚ್ಚಳದ ಶೇ.15ರಷ್ಟು ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಾರಿಗೆ ನೌಕರರ ಪರವಾಗಿ 500 ಕಿಮೀವರೆಗೆ ಪಾದಯಾತ್ರೆ ಹೊರಟಿದ್ದಾರೆ ಆಧುನಿಕ ಗಾಂಧಿ ಮುತ್ತಣ್ಣ ಚ.ತಿರ್ಲಾಪುರ ಅವರು.
ಕಳೆದ ನಾಲ್ಕು ವರ್ಷಗಳಿಂದ ನೌಕರರ ಸಂಘಟನೆಗಳು ಮಾಡಿಕೊಂಡು ಬರುತ್ತಿರುವ ಹೋರಾಟವನ್ನು ಸರ್ಕಾರ ಮತ್ತು ಆಡಳಿತ ಮಂಡಳಿಗೆ ನೆನಪಿಸಿ ನೌಕರರಿಗೆ ಸೌಲಭ್ಯ ಕಲ್ಪಿಸಿಕೊಡುವ ಸಲುವಾಗಿ ನಿನ್ನೆಯಿಂದ ಅಂದರೆ ಆ.9ರಿಂದ ಗದಗ ಜಿಲ್ಲೆಯ ರೋಣ ಬಸ್‌ನಿಲ್ದಾಣದಿಂದ ಪಾದಯಾತ್ರೆ ಆರಂಭಿಸಿದ್ದು, ಬೆಂಗಳೂರು ವಿಧಾನಸೌಧದವರೆಗೂ ಸಾಗಲಿದೆ.
ಈ ನಡುವೆ ಸರ್ಕಾರ 2020ರ ಡಿಸೆಂಬರ್ ತಿಂಗಳಲ್ಲಿ ನಡೆದ ಸಾರಿಗೆ ಮುಷ್ಕರದ ಸಮಯದಲ್ಲಿ (ಅಂದಿನ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ್ ಸವದಿ ಮತ್ತು ಅಂದಿನ ಗೃಹ ಮಂತ್ರಿಗಳಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ) ನಡೆದ ಸಂಧಾನ ಸಭೆಯಲ್ಲಿ ಸರ್ಕಾರ ಸಾರಿಗೆ ನೌಕರರಿಗೂ 6 ನೇ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡುವುದಾಗಿ ಲಿಖಿತ ರೂಪದಲ್ಲಿ ಭರವಸೆ ಕೊಟ್ಟಿತ್ತು. ಆದರೆ ಈವರೆಗೂ ಈಡೇರಿಲ್ಲ.
ಇದಿಷ್ಟೇ ಅಲ್ಲದೆ ಅಂದಿನ ಸಾರಿಗೆ ಸಚಿವರು ಅನೇಕ ಬಾರಿ ಮಾಧ್ಯಮಗಳಲ್ಲಿ 6ನೇ ವೇತನ ಆಯೋಗ ಸಾರಿಗೆ ನೌಕರರಿಗೆ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿಕೆ ನೀಡಿದ್ದರು. ಕೊನೆಗೆ ತೆಗೆದುಕೊಂಡ ಕಾಲಾವಧಿಯೊಳಗೆ ಅವರೇ ಕೊಟ್ಟ ಭರವಸೆ ಈಡೇರಿಸದ ಕಾರಣ 2021ರ ಏಪ್ರಿಲ್ ತಿಂಗಳಲ್ಲಿ ಅನಿವಾರ್ಯವಾಗಿ ನಾವು ಮುಷ್ಕರ ಮಾಡಬೇಕಾಯಿತು. ಆ ಸಂದರ್ಭದಲ್ಲಿ ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಮತ್ತು ಅಮಾನತು ಮಾಡಿ, ನೌಕರರು ಮತ್ತು ಕುಟುಂಬ ಸದಸ್ಯರ ಮೇಲೆ ಸುಳ್ಳು ಪೊಲೀಸ್ ಕೇಸುಗಳನ್ನು ಹಾಕಿತು ಅಂದಿನ ಬಿಜೆಪಿ ಸರ್ಕಾರ.
ಬಳಿಕ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಪದವಿಗೆ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಎಸ್. ಬೊಮ್ಮಾಯಿ ಅವರೇ ಬಂದರು. ಇನ್ನು ಶ್ರೀರಾಮುಲು ಅವರು ಸಾರಿಗೆ ಸಚಿವರಾದ ಮೇಲೆ ಅವರಿಗೂ ಸಹ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸುವಂತೆ ಮತ್ತು ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಆನೇಕ ಬಾರಿ ಮನವಿ ಮಾಡಿಕೊಂಡು ಜತೆಗೆ ಶಾಂತಿಯುತ ಹೋರಾಟಗಳನ್ನು ಮಾಡಿದರು.
ಆದರೆ, ಈವರೆಗೂ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸಿಲ್ಲ ಮತ್ತು ಸಮಸ್ಯೆಗಳನ್ನು ಸಂಪೂರ್ಣ ನಿವಾರಣೆ ಮಾಡಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ಇದೇ ಸಾರಿಗೆ ಸಚಿವರು ಬಹಿರಂಗ ಸಭೆಗಳಲ್ಲಿ ಮತ್ತು ಮಾಧ್ಯಮಗಳ ಮುಂದೆ ಸಾರಿಗೆ ನೌಕರರನ್ನು 7ನೇ ವೇತನ ಆಯೋಗದಲ್ಲಿ ಸೇರ್ಪಡೆ ಮಾಡುವುದು ನನ್ನ ಕಮಿಟ್‌ಮೆಂಟ್ (ಜವಾಬ್ದಾರಿ) ಎಂದು ಹೇಳಿದ್ದರು.
ಆದರೆ ಆ ಸರ್ಕಾರದ ಕೊನೆಯ ಬಜೆಟ್‌ನಲ್ಲೂ ಸರ್ಕಾರ ಸಾರಿಗೆ ನೌಕರರಿಗೆ ನೀಡಿದ ಲಿಖಿತ ಭರವಸೆಯನ್ನು ಈಡೇರಿಸಿಲ್ಲ. ನಾವು ಈ ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು. ಇದರಿಂದ ಸಾರಿಗೆ ಸಂಸ್ಥೆಯ 1.07 ಲಕ್ಷ ಸಾರಿಗೆ ನೌಕರರು ಮತ್ತು ಕುಟುಂಬ ಸದಸ್ಯರಿಗೆ ಭಾರಿ ನಿರಾಸೆಯಾಗಿದೆ ಎಂದು ನೌಕರರು ಅಸಮಾಧಾನ ಹೊರಹಾಕಿದರು.
ಸರ್ಕಾರ ಸಾರಿಗೆ ನೌಕರರ ಮೇಲೆ ತೋರುತ್ತಿರುವ ನಿರ್ಲಕ್ಷ್ಯತನವನ್ನು ಖಂಡಿಸಿ ಹಾಗೂ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ವತಿಯಿಂದ ಸಾರಿಗೆ ನೌಕರರು ಮತ್ತು ಕುಟುಂಬ ಸದಸ್ಯರುಅನಿದಿರ್ಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡರು ಆದರೂ ಬೇಡಿಕೆ ಈಡೇರಲೇ ಇಲ್ಲ.
ಬಳಿಕ ವಿಧಾನಸಭಾ ಚುನಾವಣೆ ಬಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನಗೊಂಡು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇನ್ನು ಚುನಾವಣೆಯಲ್ಲಿ ಸಾರಿಗೆ ನೌಕರರಿಗೆ ಕೊಟ್ಟ ಭರವಸೆಯಂತೆ ಈ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳಬೇಕಿದೆ. ಆದರೆ ಈವರೆಗೂ ಆ ಭರವಸೆ ಬಗ್ಗೆ ಯಾವುದೇ ಚಕಾರವೆತ್ತಿಲ್ಲ. ಆದರೆ ನಾವು ಸರ್ಕಾರಿ ನೌಕರರಿಗೆ ಸರಿಸಮಾನವ ವೇತನ ಕೊಡುತ್ತೇವೆ ಎಂದು ನೌಕರರ ಸಂಘಟನೆಗಳ ಮುಖಂಡರಿಗೆ ಭರವಸೆ ಕೊಡುತ್ತಿದ್ದಾರೆ.
ಇನ್ನು ಈ ಎಲ್ಲವನ್ನು ನೋಡಿರುವ ಆಧುನಿಕ ಗಾಂಧಿ ಮುತ್ತಣ್ಣ ಚ.ತಿರ್ಲಾಪುರ ಅವರು ಸಾರಿಗೆ ನೌಕರರಿಗೆ ಕಾನೂನಾತ್ಮಕವಾಗಿ ಸಿಗಬೇಕಿರುವ ವೇತನ ಇನ್ನಿತರ ಸೌಲಭ್ಯಗಳನ್ನು ಕೂಡಲೇ ಕೊಡಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ಆರಂಭಿಸಿದ್ದಾರೆ. ಇದಕ್ಕೆ ನೌಕರರು ಸಾಥ್ ಕೊಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.
ಪಾದಯಾತ್ರೆ ಮಾರ್ಗ : ಗದಗ ಜಿಲ್ಲೆಯ ರೋಣ ಬಸ್ ನಿಲ್ದಾಣದಿಂದ ಗದಗ, ಮುಂಡರಗಿ, ಹೂವಿನಹಡಗಲಿ, ಜಗಳೂರ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರುವರೆಗೆ ಸಾಗಲಿದೆ.
ಸರ್ಕಾರಿ ನೌಕರರಿಗೆ ಕೊಟ್ಟ ಮಾತಿನಂತೆ 7 ನೆ ವೇತನ ಆಯೋಗದಂತೆ ವೇತನ ಕೊಡಲು ಒಪ್ಪಿದ್ದಾರೆ ,ಆದರೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಹಾಗೆ ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡಲು ಇದೇ ಸರ್ಕಾರ ಅದರ ಪ್ರಸ್ತಾಪವೇ
ಮಾಡುತ್ತಿಲ್ಲ ,ಯಾಕೆ ಅವರೇನು ಕನ್ನಡಿಗರು ಅಲ್ಲವೇ ?.ಚುನಾವಣೆಗೂ ಮೊದಲು ಈಗಿನ ಸಚಿವರಾದ HK ಪಾಟೀಲರು ,ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಾಸಕರಾದ ಸವದಿ ಅವರು ವಿಡಿಯೋ ಮೂಲಕ ಸರಿ ಸಮಾನ ವೇತನ ಕೊಡುತ್ತೇವೆಂದು ಹೇಳಿದ್ದು ಮರೆತರೇ.ಇದು ನಿಮಗೆ ನ್ಯಾಯವೇ.ಇನ್ನಾದರೂ ಈ ಮೂರೂ ಜನ ಇದರ ಬಗ್ಗೆ ಕಾರ್ಯಪ್ರವೃತ್ತರಾಗಿ ಕೊಟ್ಟ ಮಾತು ಉಳಿಸಿಕೊಳ್ಳಿ. ಇಲ್ಲ ಅಂದರೆ ಇವರ ಶಾಪ ತಟ್ಟಿ ಅದಿಕಾರ ಕಳೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ