KSRTC ಮೈಸೂರು: ಹಲವಾರು ವರ್ಷಗಳಿಂದ ಕೋರ್ಟ್‌ನಲ್ಲಿ ಇದ್ದ 90 ಪ್ರಕರಣಗಳು ಇತ್ಯರ್ಥ – ನಿರಾಳರಾದ ವಿವಿಧ ವಿಭಾಗಗಳ ನೌಕರರು

ಮೈಸೂರು: ಮೈಸೂರಿನ ಔಧ್ಯಮಿಕ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಮಂಗಳೂರು ಮತ್ತು ಚಿಕ್ಕಮಂಗಳೂರು ವಿಭಾಗದ ಸುಮಾರು 90 ಪ್ರಕರಣಗಳನ್ನು ಶನಿವಾರ ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

ಹಲವಾರು ವರ್ಷಗಳಿಂದ ವಿವಿಧ ಪ್ರಕರಣಗಳಡಿ ನ್ಯಾಯಾಲಯಕ್ಕೆ ಅಲೆಯುತ್ತಿದ್ದ ನೌಕರರು. ಶನಿವಾರ (ಡಿ.6) ನಡೆದ ರಾಜೀಸಂಧಾನ ಸಫಲವಾಗಿದ್ದು ಈ ಮೂಲಕ ನೌಕರರು ಈ ಪ್ರಕರಣಗಳಿಂದ ನಿರಾಳರಾದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಬಿ.ಎಸ್.ಸುರೇಶ್ ಅವರ ಮುಂದಾಳತ್ವದಲ್ಲಿ ಸಂಸ್ಥೆಯ ಮುಖ್ಯ ಕಾನೂನು ಅಧಿಕಾರಿ ವೆಂಕಟೇಶ್ ಅವರನ್ನು ಮೈಸೂರಿಗೆ ಕರೆತಂದು ನ್ಯಾಯಾಧೀಶರಾದ ಸಂಧ್ಯಾ ರಾವ್ ಅವರ ಅಧ್ಯಕ್ಷತೆಯಲ್ಲಿ ಸುಮಾರು 90 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.
ನೌಕರರ ಒಂದು ಸಂಘಟನೆಯ ಗೌರವಾಧ್ಯಕ್ಷರ ಮುಂದಾಳತ್ವದಲ್ಲಿ ನಡೆದಿರುವುದು ಇದೇ ಪ್ರಥಮವಾಗಿದೆ. ಹೀಗಾಗಿ ಇದು ಔಧ್ಯಮಿಕ ನ್ಯಾಯಾಲಯದ (industrial tribunal) ಇತಿಹಾಸದ ಪುಟಸೇರಿದ ಮೈಲಿಗಲ್ಲು ಎಂದೇ ಹೇಳಬಹುದು.
ನೌಕರರ ಪರವಾಗಿ ನಿಂತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲ ನೌಕರರ ಕೂಟದ ಮುಖಂಡರಿಗೆ ನಾವು ಅಭಾರಿಯಾಗಿದ್ದೇವೆ. ಜತೆಗೆ ಸಂಸ್ಥೆಯ ಮುಖ್ಯ ಕಾನೂನು ಅಧಿಕಾರಿ ವೆಂಕಟೇಶ್ ಅವರು ನೌಕರರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ನೆರವಾಗಿದ್ದಕ್ಕೆ ಅಭಿನಂದನೆಗಳು ನೌಕರರು ತಿಳಿಸಿದ್ದಾರೆ.
ಒಟ್ಟಾರೆ ಸಾರಿಗೆ ನೌಕರರು ಅದರಲ್ಲೂ ಚಾಲನಾ ಸಿಬ್ಬಂದಿ ನಿತ್ಯ ಅನುಭವಿಸುತ್ತಿರುವ ಒತ್ತಡ, ಇತರೆ ಸಮಸ್ಯೆಗಳಿಗೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವಿಜಯಪಥ ಮೀಡಿಯಾ ಸಮಗ್ರವಾದ ವರದಿ ಮಾಡುವ ಮೂಲಕ ಬೆಳಕು ಚೆಲ್ಲುತ್ತಿರುವುದನ್ನು ಗಮನಿಸುತ್ತಿರುವ ಸಂಸ್ಥೆಯ ಉನ್ನತಮಟ್ಟದ ಅಧಿಕಾರಿಗಳು ನೌಕರರು ಅನುಭವಿಸುತ್ತಿರುವ ಸಮಸ್ಯೆ ಅರಿತು ಪರಿಹಾರ ಮಾಡುತ್ತಿರುವುದು ನಮಗೆ ಖುಷಿ ತರುತ್ತಿದೆ ಎಂದು ನೌಕರರು ಪತ್ರಿಕೆಗೂ ಅಭಿನಂದನೆ ಸಲ್ಲಿಸಿದ್ದಾರೆ.
Related









