KSRTC ಮೈಸೂರು: ಅನುಕಂಪದ ಆಧಾರದ ಮೇಲೆ ಕೆಲಸ ಪ್ರಕರಣ- ಲಂಚ ಪಡೆಯುತ್ತಿದ್ದ ಸಹಾಯಕ ಆಡಳಿತಾಧಿಕಾರಿ ಲೋಕಾ ಬಲೆಗೆ


ಮೈಸೂರು: ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಅರ್ಜಿ ಹಾಕಿದ್ದ ವೇಳೆ ಕಡತವನ್ನು ಮೇಲಧಿಕಾರಿಗಳಿಗೆ ಕಳುಹಿಸುವುದಕ್ಕಾಗಿ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸಂಸ್ಥೆಯ ಮೈಸೂರು ಗ್ರಾಮೀಣ ವಿಭಾಗ ನಗರದ ಬನ್ನಿಮಂಟಪದ ಬಳಿಯ ಕೆಎಸ್‌ಆರ್‌ಟಿಸಿ (KSRTC) ಕಚೇರಿಯ ಎಎಒ ಮಂಜುನಾಥ್ ಲೋಕಾಯುಕ್ತರ ಬಲೆಗೆ ಬಿದ್ದ ಮಿಕ.
ಬುಧವಾರ ಸಂಜೆ ಮಂಜುನಾಥ್ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
10 ಸಾವಿರ ರೂಪಾಯಿ ಲಂಚ ಕೇಳಿದ ಸಂಬಂಧ ಮಂಡ್ಯದ ಸಂತೋಷ್ ಕುಮಾರ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕಾರ್ಯ ಪ್ರವೃತ್ತರಾದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಭ್ರಷ್ಟನನ್ನು ಖೆಡ್ಡಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.
ಸಂತೋಷ್ ಕುಮಾರ್ ಎಂಬವರ ತಂದೆ ಕೆಎಸ್‌ಆರ್‌ಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಅಕಾಲಿಕ ಮರಣ ಹೊಂದಿದ್ದರಿಂದ ಅನುಕಂಪದ ಆಧಾರದ ಮೇಲೆ ಕೆಲಸ ಕೇಳಿ ಸಂತೋಷ್ ಕುಮಾರ್ ಸಂಸ್ಥೆಯಗೆ ಅರ್ಜಿ ಸಲ್ಲಿಸಿದ್ದರು.
ಈ ವೇಳೆ ಅರ್ಜಿಯನ್ನು ಮೇಲಧಿಕಾರಿಗಳಿಗೆ ರವಾನಿಸಲು ಭ್ರಷ್ಟ Assistant Administrative Officer (AAO) ಮಂಜುನಾಥ್ 10 ಸಾವಿರ ರೂ. ಲಂಚ ಕೇಳಿದ್ದರು. ಈ ಸಂಬಂಧ ಸಂತೋಷ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಭ್ರಷ್ಟಾಚಾರಿ ಮಂಜುನಾಥ್‌ನಂತೆ ಸಂಸ್ಥೆಯಲ್ಲಿ ಇಂಥ ಮಿಕಗಳ ಸಂಖ್ಯೆ ಹೆಚ್ಚಾಗಿದ್ದು ಅವುಗಳಿಗೆ ಈ ರೀತಿ ಕಾನೂನಿನಡಿ ಕ್ರಮ ಕೈಗೊಂಡು ಕೆಲಸದಿಂದ ವಜಾ ಮಾಡುವ ಮೂಲಕ ತಕ್ಕ ಪಾಠ ಕಲಿಸಬೇಕಿದೆ. ಜತೆಗೆ ಸಾಋಿಗೆಯ ನಾಲ್ಕೂ ನಿಗಮಗಳಲ್ಲೂ ಇದು ಸಂಪೂರ್ಣವಾಗಿ ನಿಲ್ಲಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
Related
